
ಮುಂಬೈ: ಟಿ-20 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತಿತರರ ಆಟಗಾರರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶುಕ್ರವಾರ ಸನ್ಮಾನಿಸಿದ್ದಾರೆ. ದಕ್ಷಿಣ ಮುಂಬೈನಲ್ಲಿರುವ ತಮ್ಮ ಅಧಿಕೃತ ನಿವಾಸ 'ವರ್ಷಾ ಬಂಗಲೆ'ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಹಿತ್ ಶರ್ಮಾ ಸೇರಿದಂತೆ ಇತರ ಆಟಗಾರರಾದ ಯಶಸ್ವಿ ಜೈಸ್ವಾಲ್, ಶಿವಂ ದುಬೆ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಸನ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಶಿಂಧೆ, ಅದ್ಭುತವಾದ ಮ್ಯಾಚ್ ಡಿಫೈನಿಂಗ್ ಕ್ಯಾಚ್‌ಗಾಗಿ ಸೂರ್ಯ ಕುಮಾರ್ ಯಾದವ್ ಅವರನ್ನು ಶ್ಲಾಘಿಸಿದರು. T20 ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ನಾಲ್ವರು ಮುಂಬೈ ಆಟಗಾರರನ್ನು ಮುಂಬೈನ ಮಹಾರಾಷ್ಟ್ರ ವಿಧಾನ ಭವನದ ಸಂಕೀರ್ಣದಲ್ಲಿ ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಮುಂಬೈನಲ್ಲಿ ಗುರುವಾರ ರಾತ್ರಿ ನಡೆದ ಭಾರತೀಯ ಕ್ರಿಕೆಟ್ ತಂಡದ ವಿಜಯೋತ್ಸವ ಮೆರವಣಿಗೆಯಲ್ಲಿ ಭಾರೀ ಜನಸ್ತೋಮ ನೆರೆದಿದ್ದರಿಂದ ಉಂಟಾದ ನೂಕಾಟ, ತಳ್ಳಾಟದಲ್ಲಿ ಗಾಯಗೊಂಡು ಸುಮಾರು 11 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
Advertisement