
ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಗುರುವಾರ ನಡೆದ ಟಿ-20 ವಿಶ್ವಕಪ್ ವಿಜೇತ ಭಾರತ ತಂಡದೊಂದಿಗೆ ವಿಜಯೋತ್ಸವ ವೇಳೆ ಭಾರೀ ಜನದಟ್ಟಣೆ ನಿಯಂತ್ರಣದಲ್ಲಿ ಅದ್ಬುತ ಕೆಲಸ ಮಾಡಿದ ಪೊಲೀಸರಿಗೆ ವಿರಾಟ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಧನ್ಯವಾದ ಸಲ್ಲಿಸಿದ್ದಾರೆ.
2ನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಪ್ರಸಿದ್ದ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡದ ವಿಜಯೋತ್ಸವ ಹಾಗೂ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಭಾರತೀಯ ಕ್ರಿಕೆಟ್ ತಂಡದ ಫೋಟೋಗಳಿಂದ ಸಿಂಗರಿಸಲಾಗಿದ್ದ ತೆರೆದ ಬಸ್ ನಲ್ಲಿ ವಿಜಯ ಯಾತ್ರೆ ವೇಳೆ ಅಪಾರ ಪ್ರಮಾಣದಲ್ಲಿ ನೆರೆದಿದ್ದ ಅಭಿಮಾನಿಗಳು ಮಳೆ ನಡುವೆಯೂ ತಮ್ಮ ನೆಚ್ಚಿನ ಆಟಗಾರರನ್ನು ಕಣ್ತುಂಬಿಕೊಂಡು ಶುಭಾಶಯ ತಿಳಿಸಿದರು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾ ವಿಜಯೋತ್ಸವ ಮೆರವಣಿಗೆಯಲ್ಲಿ ಅಸಾಧಾರಣ ಕೆಲಸ ಮಾಡಿದ್ದಕ್ಕಾಗಿ ಮುಂಬೈ ನಗರ ಪೊಲೀಸರಿಗೆ ಧನ್ಯವಾದಗಳು. ನಿಮ್ಮ ಸಮರ್ಪಣೆ ಮತ್ತು ಸೇವೆಯು ಹೆಚ್ಚು ಮೆಚ್ಚುಗೆ ಪಡೆದಿದೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.
ಆಲ್ ರೌಂಡರ್ ಜಡೇಜಾ ಕೂಡಾ ಇದೇ ರೀತಿಯ ಟ್ವೀಟ್ ಮಾಡಿದ್ದಾರೆ. ವಿಜಯೋತ್ಸವದ ಭಾಗವಾಗಲು ಸಾಗರೋಪಾದಿಯಲ್ಲಿ ಮರೀನ್ ಡ್ರೈವ್ ನಲ್ಲಿ ನೆರೆದಿದ್ದ ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಿದ್ದಕ್ಕಾಗಿ ಧನ್ಯವಾದ ಎಂದಿದ್ದಾರೆ.
Advertisement