
ಮುಂಬೈ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಫೈನಲ್ ನಲ್ಲಿ ಮಣಿಸಿದ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡ ಇಂದು ಸ್ವದೇಶಕ್ಕೆ ಆಗಮಿಸಿದ್ದು, ಮುಂಬೈನಲ್ಲಿ ಆಯೋಜನೆಯಾಗಿರುವ Team India victory paradeಗೆ ಜನಸಾಗರವೇ ಸೇರಿದೆ.
ಹೌದು.. ಟಿ20 ವಿಶ್ವಕಪ್ ಗೆದ್ದ ಭಾರತದ ತಂಡದ ಆಟಗಾರರಿಗೆ ಮುಂಬೈನಲ್ಲಿ ವಿಜಯೋತ್ಸವ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ತಮ್ಮ ನೆಚ್ಚಿನ ಆಟಗಾರರನ್ನು ಸ್ವಾಗತಿಸಲು ವಾಂಖೆಡೆ ಕ್ರೀಡಾಂಗಣದ ಬಳಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಪ್ರಮುಖವಾಗಿ ವಿಕ್ಟರಿ ಪರೇಡ್ ಸಾಗುವ ಮುಂಬೈನ ಮರೀನ್ ಡ್ರೈವ್ ನಲ್ಲಿ ಲಕ್ಷಾಂತರ ಜನ ಕ್ರಿಕೆಟ್ ಅಭಿಮಾನಿಗಳು ನೆರೆದಿದ್ದು, ಚಾಂಪಿಯನ್ ಆಟಗಾರರ ನೋಡಲು ಕಾತುರದಿಂದ ಕಾದಿದ್ದಾರೆ.
ಮುಂಬೈ ಕಡೆ ಪ್ರಯಾಣ ಬೆಳೆಸಿರುವ ಆಟಗಾರರು ಸ್ವಲ್ಪ ಹೊತ್ತಿನಲ್ಲಿ ತೆರೆದ ಬಸ್‌ನಲ್ಲಿ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ನಾರಿಮನ್ ಪಾಯಿಂಟ್‌ನಿಂದ ಪ್ರಾರಂಭವಾಗುವ ವಿಜಯೋತ್ಸವ ಮೆರವಣಿಗೆ ಮರೀನ್ ಡ್ರೈವ್ ಮೂಲಕ ವಾಂಖೆಡೆ ಕ್ರೀಡಾಂಗಣಕ್ಕೆ ತಲುಪಲಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಆಟಗಾರರಿಗೆ ಬಿಸಿಸಿಐ ಅಭಿನಂದನೆ ಸಲ್ಲಿಸಲಿದೆ. ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಮುಂಬೈನ ಗಲ್ಲಿಗಲ್ಲಿಗಳಲ್ಲಿ ಜನ ಸೇರಿದ್ದು, ವಾಂಖೆಡೆ ಕ್ರೀಡಾಂಗಣ ಅಕ್ಷರಶಃ ಅಭಿಮಾನಿಗಳಿಂದ ತುಂಬಿ ಹೋಗಿದೆ. ಕ್ರೀಡಾಂಗಣದ ಸುತ್ತಮುತ್ತ ಕೈಕಾಲು ಹಾಕದಷ್ಟು ಮಟ್ಟಿಗೆ ಜನರು ಕಿಕ್ಕಿರಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಬೆರಿಲ್ ಚಂಡಮಾರುತದಿಂದ ತಡವಾಗಿ ತವರಿಗೆ ಬಂದ ಟೀಂ ಇಂಡಿಯಾ
ಬಾರ್ಬಡೋಸಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ರನ್‌ಗಳ ರೋಚಕ ಜಯ ಗಳಿಸುವ ಮೂಲಕ ಭಾರತ ತಂಡ ಚಾಂಪಿಯನ್ ಆಗಿತ್ತು. ವಿಶ್ವಕಪ್ ವಿಜೇತ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ ಬಹುಮಾನ ಘೋಷಿಸಿದೆ.
ಇದೇ ಸಂಭ್ರಮದಲ್ಲಿದ್ದ ಟೀಂ ಇಂಡಿಯಾಗೆ ಬಾರ್ಬಡೋಸ್ ಹವಾಮಾನ ವೈಪರೀತ್ಯ ಆಘಾತ ನೀಡಿತ್ತು. ಬೆರಿಲ್ ಚಂಡಮಾರುತ ಅಪ್ಪಳಿಸಿದ ಪರಿಣಾಮ ಇಡೀ ಬಾರ್ಬಡೋಸ್ ಅಘೋಷಿತ ತುರ್ತು ಪರಿಸ್ಥಿತಿಗೆ ಒಳಗಾಗಿ, ಎಲ್ಲ ರೀತಿಯ ಸೇವೆಗಳು ಸ್ಥಗಿತವಾಗಿತ್ತು. ಬಸ್, ರೈಲು, ವಿಮಾನ ಸೇರಿದಂತೆ ಎಲ್ಲ ಬಗೆಯ ಸಂಚಾರ ವ್ಯವಸ್ಥೆ ಸ್ಥಗಿತವಾಗಿತ್ತು.
2 ದಿನಗಳ ಬಳಿಕ ಚಂಡಮಾರುತದ ಅಬ್ಬರ ಇಳಿದ ಬಳಿಕ ಬಾರ್ಬಡೋಸ್‌ನಲ್ಲಿಯೇ ಉಳಿದಿದ್ದ ಟೀಮ್ ಇಂಡಿಯಾ ಆಟಗಾರರು ನಿನ್ನೆ ಭಾರತದತ್ತ ಪಯಣ ಬೆಳೆಸಿದ್ದರು. ಇಂದು ದೆಹಲಿಗೆ ಬಂದಿಳಿದು, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುಮಾರು ಎರಡು ಗಂಟೆ ಕಾಲಕಳೆದಿದ್ದರು. ಇದೀಗ ವಿಕ್ಟರಿ ಪರೇಡ್ ಗಾಗಿ ಮುಂಬೈಗೆ ಆಗಮಿಸಿದ್ದಾರೆ.
ವಿಕ್ಚರಿ ಪರೇಡ್ ಗೆ ವಿಶೇಷ ಬಸ್
13 ವರ್ಷಗಳ ಕಾಯುವಿಕೆಯ ನಂತರ ಭಾರತ ತಂಡ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದು ತಂದಿದ್ದು, ಈ ಅಭೂತಪೂರ್ವ ಸಾಧನೆಗಾಗಿ ಮುಂಬೈನಲ್ಲಿ ಬಿಸಿಸಿಐ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಭಾರತ ತಂಡದ ಚಾಂಪಿಯನ್ ಆಟಗಾರರನ್ನು ಹುರಿದುಂಬಿಸಲು ಮತ್ತು ಟೂರ್ನಿಯುದ್ದಕ್ಕೂ ತಂಡದ ಬೆನ್ನಿಗೆ ನಿಂತಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಆಟಗಾರರು ತೆರೆದ ಬಸ್ ನಲ್ಲಿ ಮೆರವಣಿಗೆಯಲ್ಲಿ ವಾಂಖೆಡೆ ಕ್ರೀಡಾಂಗಣಕ್ಕೆ ಸಾಗಲಿದ್ದಾರೆ.
ಬಿಸಿಸಿಐ ಮತ್ತು ಮುಂಬೈ ಅಧಿಕಾರಿಗಳು ಹಂಚಿಕೊಂಡಿರುವ ಮಾಹಿತಿ ಪ್ರಕಾರ, T20 ವಿಶ್ವಕಪ್ ವಿಜೇತ ತಂಡವು ನಾರಿಮನ್ ಪಾಯಿಂಟ್‌ನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (NCPA) ನಿಂದ ವಾಂಖೆಡೆ ಸ್ಟೇಡಿಯಂವರೆಗೆ ಸಂಜೆ ತೆರೆದ ಬಸ್ ಮೆರವಣಿಗೆಗೆ ನಿಗದಿಪಡಿಸಲಾಗಿದ್ದು, ಮೆರವಣಿಗೆ ಬಳಿಕ ವಾಂಖೆಡೆ ಕ್ರೀಡಾಂಗಣದಲ್ಲಿ ಆಟಗಾರರನ್ನು ಬಿಸಿಸಿಐ ಸನ್ಮಾನಿಸಲಿದೆ.
Advertisement