ಜಮ್ಮು: ಕಥುವಾದಲ್ಲಿ ಉಗ್ರರ ಹೊಂಚು ದಾಳಿ; 5 ಯೋಧರು ಹುತಾತ್ಮ, 6 ಮಂದಿಗೆ ಗಾಯ
ಕಥುವಾ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮಚೇಡಿ ಪ್ರದೇಶದಲ್ಲಿ ಸೋಮವಾರ ಉಗ್ರರು ಸೇನಾ ವಾಹನಗಳ ಮೇಲೆ ಹೊಂಚು ದಾಳಿ ನಡೆಸಿದ್ದರಿಂದ 5 ಯೋಧರು ಹುತಾತ್ಮರಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಥುವಾ ಪಟ್ಟಣದಿಂದ 150 ಕಿ.ಮೀ ದೂರದಲ್ಲಿರುವ ಲೋಹೈ ಮಲ್ಹಾರ್‌ನ ಬದ್ನೋಟಾ ಗ್ರಾಮದ ಬಳಿಯ ಕಿಂಡ್ಲಿ-ಮಲ್ಹಾರ್ ರಸ್ತೆಯಲ್ಲಿ ಮಧ್ಯಾಹ್ನ 3.30 ರ ಸುಮಾರಿನಲ್ಲಿ ಉಗ್ರರು ಹೊಂಚು ಹಾಕಿ, ಸೇನಾ ವಾಹನದ ಮೇಲೆ ಗ್ರೇನೆಡ್ ಹಾಗೂ ಗುಂಡಿನ ದಾಳಿ ನಡೆಸಿದ್ದಾರೆ.
ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ ಆದರೆ ಉಗ್ರರು ಸಮೀಪದ ಅರಣ್ಯಕ್ಕೆ ಓಡಿಹೋದರು. ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಭಯೋತ್ಪಾದಕರು ಇತ್ತೀಚೆಗೆ ಗಡಿಯಿಂದ ಒಳನುಸುಳುತ್ತಿದ್ದು, ಎತ್ತರದ ಪ್ರದೇಶಗಳಿಗೆ ತೆರಳುತ್ತಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಒಟ್ಟು 10 ಸೈನಿಕರು ಗಾಯಗೊಂಡಿದ್ದರು. ಅವರಲ್ಲಿ ನಾಲ್ವರು ನಂತರ ಹುತಾತ್ಮರಾದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಕಥುವಾ ಜಿಲ್ಲೆಯಲ್ಲಿ ಕಳೆದ ನಾಲ್ಕು ವಾರಗಳಲ್ಲಿ ನಡೆದ ಎರಡನೇ ಪ್ರಮುಖ ಘಟನೆ ಇದಾಗಿದೆ.
ಜೂನ್ 12 ಮತ್ತು 13 ರಂದು, ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತ್ಯೆಗೀಡಾಗಿದ್ದರು. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರೊಬ್ಬರು ಹುತಾತ್ಮರಾಗಿದ್ದರು. ಜೂನ್ 26 ರಂದು ದೋಡಾ ಜಿಲ್ಲೆಯ ಗಂಡೋ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಮೂವರು ವಿದೇಶಿ ಉಗ್ರರು ಸಾವನ್ನಪ್ಪಿದ್ದರು. ಇದಾದ ಹದಿನೈದು ದಿನಗಳೊಳಗೆ ಮತ್ತೊಂದು ಪೈಶಾಚಿಕ ದಾಳಿ ನಡೆದಿದೆ.
ಈ ಪ್ರದೇಶದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಲು ಮತ್ತು ಶಾಂತಿಯುತ ವಾತಾವರಣ ಕದಡಲು ಪಾಕಿಸ್ತಾನಿ ಏಟೆಂಟರು ಪ್ರಯತ್ನಿಸುತ್ತಿರುವುದಕ್ಕೆ ಅಧಿಕಾರಿಗಳೇ ಕಾರಣವಾಗಿದ್ದಾರೆ. ಜೂನ್ 9 ರಂದು ರಿಯಾಸಿ ಜಿಲ್ಲೆಯ ಶಿವ ಖೋರಿ ದೇವಸ್ಥಾನದಿಂದ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರಿಂದ ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿದ್ದರು. 41 ಮಂದಿ ಗಾಯಗೊಂಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ