
ನವದೆಹಲಿ: ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ನಿರಾಕರಣೆಗಾಗಿ ''ಷರಿಯಾ'' ಕಾನೂನನ್ನು ಬಳಕೆ ಮಾಡಲಾಗುತ್ತಿದೆ ಎಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಸಂಸ್ಥಾಪಕಿ, ಸಾಮಾಜಿಕ ಕಾರ್ಯಕರ್ತೆ ಜಾಕಿಯಾ ಸೋಮನ್ ಹೇಳಿದ್ದಾರೆ.
ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೂ ಜೀವನಾಂಶದ ಹಕ್ಕು ಅನ್ವಯಿಸುತ್ತದೆ ಎಂಬ ಸುಪ್ರೀಂ ಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜಾಕಿಯಾ ಸೋಮನ್, 'ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ನಿರಾಕರಣೆಗಾಗಿ ''ಷರಿಯಾ'' ಕಾನೂನನ್ನು ಬಳಕೆ ಮಾಡಲಾಗುತ್ತಿದೆ.
ಮುಸ್ಲಿಂ ಮಹಿಳೆಯರಿಗೆ ಜೀವನಾಂಶದ ಹಕ್ಕುಗಳನ್ನು ನಿರಾಕರಿಸುವ ಷರಿಯಾವನ್ನು ಈಗ ಸುಪ್ರೀಂ ಕೋರ್ಟ್ ತೀರ್ಪು ಅಪ್ರಸ್ತುತಗೊಳಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಸಾಮಾಜಿಕ ಕಾರ್ಯಕರ್ತೆ ಜಾಕಿಯಾ ಸೋಮನ್ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ವ್ಯವಹಾರಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಸಮಾನತೆ ಕೋರಿ ಸಾಂಪ್ರದಾಯಿಕ ಮುಸ್ಲಿಂ ಪಾದ್ರಿಗಳ ವಿರುದ್ಧ ಅನೇಕ ಕಾನೂನು ಹೋರಾಟ ನಡೆಸಿದ್ದಾರೆ.
ಈ ಹಿಂದೆ ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧ ಹೋರಾಡಿದ ಮತ್ತು ಏಕರೂಪ ನಾಗರಿಕ ಸಂಹಿತೆಯ ಪರ ಧ್ವನಿಯ ಪ್ರತಿಪಾದಕರೂ ಕೂಡ ಆಗಿರುವ ಸೋಮನ್ ಅವರು ಜುಲೈ 10, 2024 ರಂದು ತ್ರಿವಳಿ ತಲಾಖ್ ಕುರಿತು ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಅಗಸ್ಟ್ನೆ ಜಾರ್ಜ್ ಮಸಿಹ್ ಅವರ ದ್ವಿಸದಸ್ಯ ಪೀಠವು ನೀಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದರು.
ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 125 ರ ಅಡಿಯಲ್ಲಿ ಮುಸ್ಲಿಂ ಮಹಿಳೆಯರು ತಮ್ಮ ಗಂಡನಿಂದ ಜೀವನಾಂಶವನ್ನು ಪಡೆಯಬಹುದು ಎಂದು ಅವರು ವಾದಿಸಿದ್ದಾರೆ.
Advertisement