
ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಕ್ರೇನ್ ಸಹಾಯದಿಂದ ದೊಡ್ಡ ಗಾತ್ರದ ಭಾರವಾದ ಬಾಯ್ಲರ್ ಮೇಲೆತ್ತುವ ವೇಳೆ ಅದು ಜಾರಿ ಕೆಳಗೆ ನಿಂತಿದ್ದ ಇಬ್ಬರು ಕಾರ್ಮಿಕರು ಮೇಲೆ ಬಿದ್ದಿದೆ. ಪರಿಣಾಮ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಭಿವಂಡಿ ಪಟ್ಟಣದ ಸಾರವ್ಲಿ ಎಂಐಡಿಸಿ(ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮ)ಯಲ್ಲಿರುವ ಡೈಯಿಂಗ್ ಘಟಕದಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಕೊಂಗಾವ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಯ್ಲರ್ ಅನ್ನು ಕ್ರೇನ್ ಸಹಾಯದಿಂದ ಮೇಲೆತ್ತುತ್ತಿದ್ದಾಗ ಅದು ಜಾರಿ ಕೆಳಗೆ ನಿಂತಿದ್ದ ಕಾರ್ಮಿಕರ ಮೇಲೆ ಬಿದ್ದಿದೆ ಎಂದು ಅವರು ಹೇಳಿದ್ದಾರೆ.
ಮೃತ ಕಾರ್ಮಿಕರನ್ನು ಬಲರಾಮ್ ಚೌಧರಿ(55) ಮತ್ತು ಪಾಂಡುರಂಗ ಪಾಟೀಲ್(65) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಸದ್ಯಕ್ಕೆ ಆಕಸ್ಮಿಕ ಸಾವಿನ ಪ್ರಕರಣ ದಾಖಲಾಗಿದ್ದು, ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement