
ಪುಣೆ: ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾಯಿ ಪುರುಷರ ಗುಂಪಿಗೆ ಬಂದೂಕು ತೋರಿಸಿ ಬೆದರಿಕೆ ಹಾಕುತ್ತಿರುವ ವೀಡಿಯೊ ವೈರಲ್ ಆಗಿದ್ದು, ವಿವಾದಿತ ಅಧಿಕಾರಿಯನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಪುಣೆ ಜಿಲ್ಲೆಯ ಮುಲ್ಶಿ ತಹಸಿಲ್‌ನಲ್ಲಿ ಮಹಾರಾಷ್ಟ್ರದ ನಿವೃತ್ತ ಸರ್ಕಾರಿ ಅಧಿಕಾರಿಯಾಗಿರುವ ಪೂಜಾ ಅವರ ತಂದೆ ದಿಲೀಪ್ ಖೇಡ್ಕರ್ ಅವರು ಖರೀದಿಸಿದ ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದ್ದು, ಈ ವೇಳೆ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರು ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ.
ಅಕ್ಕಪಕ್ಕದ ರೈತರ ಜಮೀನನ್ನು ಖೇಡ್ಕರ್ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಎರಡು ನಿಮಿಷಗಳ ಈ ವಿಡಿಯೋದಲ್ಲಿ ಪೂಜಾ ಖೇಡ್ಕರ್ ಅವರ ತಾಯಿ ಮನೋರಮಾ ಖೇಡ್ಕರ್ ಅವರು ತಮ್ಮ ಖಾಸಗಿ ಭದ್ರತಾ ಸಿಬ್ಬಂದಿಯೊಂದಿಗೆ ನೆರೆಹೊರೆಯವರೊಂದಿಗೆ ತೀವ್ರ ವಾಗ್ವಾದದಲ್ಲಿ ತೊಡಗಿದ್ದಾರೆ.
ಮನೋರಮಾ ಖೇಡ್ಕರ್ ತಮ್ಮ ಕೈಯಲ್ಲಿ ಪಿಸ್ತೂಲ್ ಹಿಡಿದು ವ್ಯಕ್ತಿಯೊಬ್ಬನನ್ನು ಕೂಗುತ್ತಿರುವುದನ್ನು ಕಾಣಬಹುದು. ನಂತರ ಆ ವ್ಯಕ್ತಿಯ ಬಳಿ ಹೋಗಿ ನೀನು ನಿಜವಾದ ಮಾಲೀಕನೇ ಆಗಿರಬಹುದು. ಆದರೆ ಈ ಜಾಗವು ನನ್ನ ಹೆಸರಿನಲ್ಲಿದೆ, ಅದು ಕೋರ್ಟ್ನಲ್ಲಿದೆ ಈ ಜಾಗವನ್ನು ನೀನು ಹೇಗೆ ತೆಗೆದುಕೊಳ್ತೀಯಾ ನಾನು ನೋಡ್ತೇನೆ ಎಂದು ಧಮಕಿ ಹಾಕಿದ್ದಾರೆ. ಆದರೆ ಮೇಡಂ ಕೋರ್ಟ್ ಇನ್ನೂ ತೀರ್ಪು ನೀಡಿಲ್ಲ, ಈಗಲೂ ಈ ಜಾಗದ ನಿಜವಾದ ಮಾಲೀಕ ನಾನೇ ಎಂದು ವ್ಯಕ್ತಿ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು ತಮ್ಮ ಖಾಸಗಿ ಆಡಿ ಕಾರಿಗೆ ಸೈರನ್ ಹಾಗೂ ಸರ್ಕಾರಿ ಫಲಕ ಅಳವಡಿಸಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನಲ್ಲೇ ಅವರನ್ನು ಅಧಿಕಾರ ದುರುಪಯೋಗದ ಆರೋಪದ ಮೇಲೆ ಪುಣೆಯಿಂದ ವಾಶಿಮ್‌ಗೆ ವರ್ಗಾವಣೆ ಮಾಡಲಾಗಿದೆ.
Advertisement