
ಕೋಲ್ಕತ್ತಾ: ರಾಜ್ಯ ಸರ್ಕಾರವು NEET ಮತ್ತು ಹೊಸದಾಗಿ ಜಾರಿಯಾದ ಕ್ರಿಮಿನಲ್ ಕಾನೂನುಗಳ ವಿರುದ್ಧ ವಿಧಾನಸಭೆಯ ಮುಂದಿನ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಹೇಳಿದ್ದಾರೆ.
ಜುಲೈ 1 ರಂದು ಜಾರಿಗೆ ಬಂದ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, “ಹೊಸ ಕ್ರಿಮಿನಲ್ ಕಾನೂನಿನಲ್ಲಿ ಅವರು ಏನು ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಆದರೆ ವೈದ್ಯರು ಮತ್ತು ಪತ್ರಕರ್ತರು ಕೂಡ ಇದಕ್ಕೆ ಹೆದರುತ್ತಿದ್ದಾರೆ. ಸ್ವಾತಂತ್ರ್ಯ ಅಪಾಯದಲ್ಲಿದೆ. ಯಾವುದೇ ಪುರಾವೆಗಳಿಲ್ಲದಿದ್ದರೂ ಶಿಕ್ಷೆ ಅನುಭವಿಸಬಹುದು ಎಂದಿದ್ದಾರೆ.
ಸಂಸತ್ತಿನಲ್ಲಿ ಪ್ರತಿಪಕ್ಷಗಳೊಂದಿಗೆ ಸಮಾಲೋಚಿಸದೆ ಮಸೂದೆಯನ್ನು ಅಂಗೀಕರಿಸಲಾಗಿದೆ. ಹೀಗಾಗಿ ಹೊಸ ಕಾನೂನುಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಪಶ್ಚಿಮ ಬಂಗಾಳ ಸಿಎಂ ಒತ್ತಾಯಿಸಿದರು.
"ಮಸೂದೆಗಳನ್ನು ಅರ್ಥಮಾಡಿಕೊಳ್ಳಲು ಯಾವುದೇ ಅವಕಾಶ ನೀಡದೆ, ಅವರು ಅದನ್ನು ಏಕಪಕ್ಷೀಯವಾಗಿ ಅಂಗೀಕರಿಸಿದ್ದಾರೆ. ಇದು ಉತ್ತಮ ಆಡಳಿತ, ನ್ಯಾಯಾಂಗ, ಕಾನೂನು ಬಂಧುತ್ವ, ಪೊಲೀಸ್ ಮತ್ತು ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ". ಹೀಗಾಗಿ ತಮ್ಮ ಸರ್ಕಾರವು ಕ್ರಿಮಿನಲ್ ಕಾನೂನುಗಳು ಮತ್ತು ನೀಟ್ ಪರೀಕ್ಷೆಯ ವಿರುದ್ಧ ನಿರ್ಣಯ ಅಂಗೀಕರಿಸುತ್ತದೆ ಎಂದರು.
ಇತ್ತೀಚಿಗೆ ನಡೆದ ಹಲವು ರಾಜ್ಯಗಳಲ್ಲಿನ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಕೇಸರಿ ಪಕ್ಷದ ಹೀನಾಯ ಸೋಲನ್ನು ಎತ್ತಿ ತೋರಿಸಿದ ಮಮತಾ ಬ್ಯಾನರ್ಜಿ,
"ಭಾರತದಾದ್ಯಂತ ಟ್ರೆಂಡ್ ಬಿಜೆಪಿ ವಿರುದ್ಧವಾಗಿದೆ... ಜನಾದೇಶ ಅವರ ವಿರುದ್ಧವಾಗಿದೆ, ಮತ್ತು ಈಗ ಅವರು ಮತ್ತೆ ಏಜೆನ್ಸಿ ರಾಜ್ ಅನ್ನು ಪ್ರಾರಂಭಿಸಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
Advertisement