
ಮುಂಬೈ: ಮಹಾರಾಷ್ಟ್ರದ ವಿವಾದಿತ ಐಎಎಸ್ ಅಧಿಕಾರಿ ಡಾ. ಪೂಜಾ ಖೇಡ್ಕರ್ ಅವರ ಐಷಾರಾಮಿ ಆಡಿ ಕಾರನ್ನು ಪುಣೆಯ ಪೊಲೀಸರು ಜಪ್ತಿ ಮಾಡಿದ್ದಾರೆ.
ಹೌದು.. ವಿವಾದಿತ ಐಎಎಸ್ ಪ್ರೊಬೇಷನರಿ ಅಧಿಕಾರಿ ಡಾ. ಪೂಜಾ ಖೇಡ್ಕರ್ ಅವರ ಐಷಾರಾಮಿ ಆಡಿ ಕಾರನ್ನು ಪುಣೆಯ ಚತುರ್ಶೃಂಗಿ ಪೊಲೀಸರು ಜಪ್ತಿ ಮಾಡಿದ್ದು, ತಮ್ಮ ದುಬಾರಿ ಖಾಸಗಿ ಕಾರಿಗೆ ಅಕ್ರಮವಾಗಿ ಅಳವಡಿಸಿದ್ದ ಕೆಂಪು ದೀಪ ಹಾಗೂ ‘ಮಹಾರಾಷ್ಟ್ರ ಸರ್ಕಾರ’ ಎಂಬ ನಾಮಫಲಕವನ್ನು ತೆರವುಗೊಳಿಸಿದ್ದಾರೆ. ಜತೆಗೆ ಕಾರಿನ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
32 ವರ್ಷದ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಬಳಸುತ್ತಿದ್ದ ಕೆಂಪು ದೀಪ ಹೊಂದಿದ್ದ ಬಿಳಿ ಬಣ್ಣದ ಔಡಿ ಕಾರಿನ ಭಾವಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಪುಣೆಗೆ ಪೋಸ್ಟಿಂಗ್ ಮಾಡಿದ್ದ ವೇಳೆ ಪ್ರತ್ಯೇಕ ಕ್ಯಾಬಿನ್, ಸಿಬ್ಬಂದಿ ಒದಗಿಸುವಂತೆ ಬೇಡಿಕೆಯಿಡುವ ಮೂಲಕ ವಿವಾದಕ್ಕೂ ಕಾರಣವಾಗಿದ್ದರು.
ಸರ್ಕಾರದ ಅನುಮತಿ ಪಡೆಯದೇ, ತಮ್ಮ ಸ್ವಂತ ಆಡಿ ಕಾರಿಗೆ ಕೆಂಪು ದೀಪ ಅಳವಡಿಸಿದ್ದರು. ಹೀಗಾಗಿ, ತರಬೇತಿ ಅವಧಿ ಮುಗಿಯುವ ಮೊದಲೇ, ಅವರನ್ನು ಪುಣೆ ಜಿಲ್ಲೆಯಿಂದ ವಾಸೀಂ ಜಿಲ್ಲೆಗೆ ವರ್ಗಾಯಿಸಲಾಗಿತ್ತು.
ಅಂಗವಿಕಲೆ ಎಂದು ಪ್ರಮಾಣಪತ್ರ ಪಡೆದಿದ್ದ ಅಧಿಕಾರಿ
ಹಿಂದುಳಿದ ವರ್ಗದ ಪ್ರಮಾಣಪತ್ರ ಹಾಗೂ ಅಂಗವಿಕಲೆ ಎಂದು ನಕಲಿ ದಾಖಲೆ ಸೃಷ್ಟಿಸಿ ಐಎಎಸ್ ಹುದ್ದೆ ಪಡೆದಿದ್ದಾರೆ ಎಂಬ ಆರೋಪ ಪೂಜಾ ವಿರುದ್ಧ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಪುಣೆ ಮೂಲದ ಖಾಸಗಿ ಸಂಸ್ಥೆಗೆ ಈಚೆಗೆ ಆರ್‌ಟಿಒ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದರು. ನೋಟಿಸ್ ನಲ್ಲಿ ಜಿಲ್ಲೆಯ ಹವೇಲಿ ತಾಲ್ಲೂಕಿನ ಶಿವಾನೆ ಗ್ರಾಮದ ಕೆಳಗಿನ ವಿಳಾಸದಲ್ಲಿ ನೋಂದಣಿಯಾದ ಎಂಎಚ್–12/ಎಆರ್700 ಔಡಿ ಕಾರಿನ ಪರಿಶೀಲನೆಗಾಗಿ ತಕ್ಷಣವೇ ಆರ್‌ಟಿಒ ಕಚೇರಿ ಮುಂದೆ ಹಾಜರುಪಡಿಸಬೇಕು. ಫ್ಲೈಯಿಂಗ್ ಸ್ಕ್ಯಾಡ್ ಕೂಡಲೇ ವಾಹನವನ್ನು ಪತ್ತೆಹಚ್ಚಿ, ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿತ್ತು.
Advertisement