
ಚಂಡೀಗಢ: ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಅಗ್ನಿವೀರರಿಗೆ ಕಾನ್ಸ್ಟೇಬಲ್, ಅರಣ್ಯ ಗಾರ್ಡ್, ಜೈಲ್ ವಾರ್ಡನ್ ಸೇರಿದಂತೆ ಹಲವು ಉದ್ಯೋಗಗಳಲ್ಲಿ ಶೇ.10 ರಷ್ಟು ಮೀಸಲಾತಿಯನ್ನು ಅಲ್ಲಿನ ಬಿಜೆಪಿ ಸರ್ಕಾರ ಘೋಷಿಸಿದೆ.
ಅಗ್ನಿವೀರ್ ಗಳು ತಮ್ಮದೇ ಉದ್ಯಮ ಆರಂಭಿಸಲು ಬಯಸಿದರೆ, ಸರ್ಕಾರ 5 ಲಕ್ಷದ ವರೆಗೆ ಬಡ್ಡಿ ರಹಿತ ಸಾಲವನ್ನೂ ನೀಡಲಿದೆ ಎಂದು ಸಿಎಂ ನಯಾಬ್ ಸಿಂಗ್ ಸೈನಿ ಹೇಳಿದ್ದಾರೆ.
ರಾಜ್ಯ ಸರ್ಕಾರದಿಂದ ಕಾನ್ಸ್‌ಟೇಬಲ್, ಮೈನಿಂಗ್ ಗಾರ್ಡ್, ಫಾರೆಸ್ಟ್ ಗಾರ್ಡ್, ಜೈಲು ವಾರ್ಡನ್ ಮತ್ತು ವಿಶೇಷ ಪೊಲೀಸ್ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಅಗ್ನಿವೀರರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸಲಾಗುವುದು’ ಎಂದು ಸಿಎಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದಷ್ಟೇ ಅಲ್ಲದೇ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಲ್ಲಿ ಅಗ್ನಿವೀರರಿಗೆ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುವುದು,ಅಗ್ನಿವೀರ್‌ಗಳ ಮೊದಲ ಬ್ಯಾಚ್‌ಗೆ, ಈ ವಯಸ್ಸಿನ ಸಡಿಲಿಕೆಯು 5 ವರ್ಷಗಳಾಗಿರುತ್ತದೆ" ಎಂದು ಸಿಎಂ ಸೈನಿ ತಿಳಿಸಿದ್ದಾರೆ.
ಹರ್ಯಾಣ ಸರ್ಕಾರದ ಆದೇಶದ ಪ್ರಕಾರ ಗ್ರೂಪ್ ಸಿ ಸಿವಿಲ್ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ಅಗ್ನಿವೀರರಿಗೆ ಶೇ.5 ರಷ್ಟು ಮೀಸಲಾತಿ ಇರುತ್ತದೆ.
"ಯಾವುದೇ ಕೈಗಾರಿಕಾ ಘಟಕವು ತಿಂಗಳಿಗೆ 30,000 ರೂ.ಗಿಂತ ಹೆಚ್ಚಿನ ಸಂಬಳದಲ್ಲಿ ಅಗ್ನಿವೀರ್ ಅನ್ನು ನೇಮಿಸಿಕೊಂಡರೆ, ನಮ್ಮ ಸರ್ಕಾರವು ಆ ಘಟಕಕ್ಕೆ ವಾರ್ಷಿಕ 60,000 ರೂ. ಸಬ್ಸಿಡಿ ನೀಡುತ್ತದೆ" ಎಂದು ಸೈನಿ ಹೇಳಿದ್ದು, ಅಗ್ನಿವೀರ್‌ಗಳಿಗೆ ಆದ್ಯತೆಯ ಮೇರೆಗೆ ಶಸ್ತ್ರಾಸ್ತ್ರ ಪರವಾನಗಿ ನೀಡಲಾಗುವುದು ಎಂದು ಅವರು ಘೋಷಿಸಿದರು.
ಸಶಸ್ತ್ರ ಪಡೆಗಳಲ್ಲಿ ಸಿಬ್ಬಂದಿಗಳ ಅಲ್ಪಾವಧಿಯ ಸೇರ್ಪಡೆಗಾಗಿ ಜೂನ್ 2022 ರಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ಪರಿಚಯಿಸಿದ ಅಗ್ನಿಪಥ್ ಮಿಲಿಟರಿ ನೇಮಕಾತಿ ಯೋಜನೆಯು ವಿರೋಧ ಪಕ್ಷಗಳು ಸೇರಿದಂತೆ ಹಲವಾರು ವಲಯಗಳಿಂದ ತೀವ್ರ ಟೀಕೆಗಳನ್ನು ಎದುರಿಸಿದೆ.
ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಗೆ ಮುನ್ನ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹರ್ಯಾಣದ ಮಹೇಂದ್ರಗಢದಲ್ಲಿ ಪ್ರತಿಪಕ್ಷ INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆಯನ್ನು ರದ್ದುಪಡಿಸಿ ಕಸದ ಬುಟ್ಟಿಗೆ ಎಸೆಯಲಾಗುವುದು ಎಂದು ಹೇಳಿದ್ದರು.
Advertisement