
ನವದೆಹಲಿ: ಮಹಾರಾಷ್ಟ್ರದ ವಿವಾದಿತ IAS ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ forgery ಪ್ರಕರಣದಡಿಯಲ್ಲಿ FIR ದಾಖಲಿಸಿದೆ.
ಅಂಗವೈಕಲ್ಯ (ಪಿಡಬ್ಲ್ಯುಬಿಡಿ) ಕೋಟಾವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ವಿವಾದಿತ ಐಎಎಸ್ ಪ್ರೊಬೇಷನರಿ ಅಧಿಕಾರಿ ಡಾ.ಪೂಜಾ ಖೇಡ್ಕರ್ ವಿರುದ್ಧ ಕೇಂದ್ರ ಲೋಕಸೇವಾ ಆಯೋಗ ಪ್ರಕರಣ ದಾಖಲಿಸಿದ್ದು, ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
'ಪೂಜಾ ಅವರು ದುಷ್ಕೃತ್ಯದ ಮೂಲಕ ತಮಗೆ ಅನುಮತಿಸಿದ್ದ ಮಿತಿಯನ್ನು ಮೀರಿ ಹಲವು ಪ್ರಯತ್ನಗಳನ್ನು ಪಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ ಇವರ ನೇಮಕಾತಿಯನ್ನೇ ರದ್ದುಗೊಳಿಸುವಂತ ಗಂಭೀರ ಕ್ರಮ ಕೈಗೊಳ್ಳಲು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ’ ಎಂದಿದೆ.
ಅಂತೆಯೇ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ತಮಗೆ ಅನುಮತಿಸಿದ್ದ ಮಿತಿಗೂ ಮೀರಿದ ಪ್ರಯತ್ನ ಪಡೆಯಲು ಪೂಜಾ ಅವರು ನಕಲಿ ದಾಖಲೆಗಳನ್ನು ಸಲ್ಲಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ಇದರಲ್ಲಿ ಅವರ ಹೆಸರು ಬದಲಾವಣೆ, ತಂದೆ ಹಾಗೂ ತಾಯಿಯ ಹೆಸರು ಬದಲಿಸಿರುವುದು, ಭಾವಚಿತ್ರ ಬದಲಾವಣೆ ಹಾಗೂ ಸಹಿ ಮತ್ತು ಇ–ಮೇಲ್ ವಿಳಾಸ, ಮೊಬೈಲ್ ಮತ್ತು ಮನೆಯ ವಿಳಾಸವನ್ನು ಬದಲಿಸುವ ಮೂಲಕ ತಮ್ಮ ಗುರುತು ಮರೆಮಾಚಿ ಆಯೋಗವನ್ನು ವಂಚಿಸಿದ್ದಾರೆ’ ಎಂದು ಆರೋಪಿಸಲಾಗಿದೆ.
ಐಎಎಸ್ ಪ್ರೊಬೇಷನರಿ ಅಧಿಕಾರಿ ಡಾ.ಪೂಜಾ ಖೇಡ್ಕರ್ ಅವರು ಸಲ್ಲಿಸಿದ ವೈದ್ಯಕೀಯ ಪ್ರಮಾಣಪತ್ರಗಳ ಸತ್ಯಾಸತ್ಯತೆ ಬಗ್ಗೆ ಪುಣೆ ಪೊಲೀಸರು ತನಿಖೆ ನಡೆಸಿದ್ದಾರೆ. ಖೇಡ್ಕರ್ ಅವರು ಸಲ್ಲಿಸಿದ ವೈದ್ಯಕೀಯ ಪ್ರಮಾಣಪತ್ರಗಳನ್ನು ಪರಿಶೀಲಿಸುವಂತೆ ಪುಣೆಯ ಪೊಲೀಸರು ಮತ್ತು ಜಿಲ್ಲಾಧಿಕಾರಿಗಳಿಗೆ ಅಂಗವಿಕಲ ಆಯುಕ್ತರ ಕಾರ್ಯಾಲಯವು ಪತ್ರ ಬರೆದಿತ್ತು.
ಪೂಜಾ ಖೇಡ್ಕರ್ ಅವರು ಸಲ್ಲಿಸಿದ ಪ್ರಮಾಣಪತ್ರಗಳು ಪ್ರಾಮಾಣಿಕವಾಗಿವೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ಕೈಗೊಂಡಿದ್ದರು. ಈ ಪ್ರಮಾಣ ಪತ್ರಗಳನ್ನು ಯಾವ ವೈದ್ಯರು ಮತ್ತು ಆಸ್ಪತ್ರೆಗಳಿಂದ ಪಡೆಯಲಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.
Advertisement