
ಚಂಡೀಗಢ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಶನಿವಾರ ಹರಿಯಾಣ ವಿಧಾನಸಭೆ ಚುನಾವಣೆಗೆ ಐದು “ಕೇಜ್ರಿವಾಲ್ ಗ್ಯಾರಂಟಿ”ಗಳನ್ನು ಬಿಡುಗಡೆ ಮಾಡಿದರು.
ಇಂದು ಪಂಚಕುಲದಲ್ಲಿ ಸುನೀತಾ ಕೇಜ್ರಿವಾಲ್ ಅವರು "ಕೇಜ್ರಿವಾಲ್ ಕಿ ಫೈವ್ ಗ್ಯಾರಂಟಿ"ಯನ್ನು ಬಿಡುಗಡೆ ಮಾಡಿದರು. ಉಚಿತ ವಿದ್ಯುತ್, ಉಚಿತ ವೈದ್ಯಕೀಯ ಚಿಕಿತ್ಸೆ, ಜನರಿಗೆ ಉಚಿತ ಶಿಕ್ಷಣ, ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 1,000 ಮತ್ತು ಯುವಕರಿಗೆ ಉದ್ಯೋಗದ ಭರವಸೆ ನೀಡಿದರು.
ಈ ವೇಳೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಆಮ್ ಆದ್ಮಿ ಪಕ್ಷದ(ಎಎಪಿ) ಹಿರಿಯ ನಾಯಕರಾದ ಸಂಜಯ್ ಸಿಂಗ್ ಮತ್ತು ಸಂದೀಪ್ ಪಾಠಕ್ ಸಹ ಉಪಸ್ಥಿತರಿದ್ದರು.
ಎಎಪಿ ರಾಷ್ಟ್ರೀಯ ಸಂಚಾಲಕರೂ ಆಗಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ಪ್ರಸ್ತುತ ಅಬಕಾರಿ ನೀತಿ ಸಂಬಂಧಿತ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಹೀಗಾಗಿ ಅವರ ಪತ್ನಿ ಸುನೀತ್ ಅವರು ಇಂದು ಕೇಜ್ರಿವಾಲ್ ಗ್ಯಾರಂಟಿಗಳನ್ನು ಬಿಡುಗಡೆ ಮಾಡಿ, ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಎಎಪಿಗೆ ಬೆಂಬಲ ನೀಡುವಂತೆ ಜನರನ್ನು ಕೋರಿದರು.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸುನೀತಾ ಅವರು, ದೆಹಲಿ ಮುಖ್ಯಮಂತ್ರಿಯ ಉತ್ತಮ ಕೆಲಸಗಳ ಬಗ್ಗೆ ಅವರಿಗೆ "ಅಸೂಯೆ" ಇದೆ ಎಂದು ಆರೋಪಿಸಿದರು.
ತಮ್ಮ ಪತಿಯನ್ನು "ಹರಿಯಾಣಾ ಕಾ ಲಾಲ್"(ಹರಿಯಾಣದ ಮಗ) ಎಂದು ಕರೆದ ಅವರು, ಬಿಜೆಪಿಗೆ ಒಂದೇ ಒಂದು ಸ್ಥಾನವೂ ಹೋಗಬಾರದು. "ಇದು ಕೇಜ್ರಿವಾಲ್ ಅಲ್ಲ, ಹರಿಯಾಣದ ಗೌರವದ ಪ್ರಶ್ನೆ" ಎಂದು ಹೇಳಿದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಉಚಿತ ವಿದ್ಯುತ್ ನೀಡಲಾಗುವುದು ಮತ್ತು ರಾಜ್ಯದಲ್ಲಿ ರಾತ್ರಿಯಿಡೀ ವಿದ್ಯುತ್ ಇರುತ್ತದೆ. "ದೆಹಲಿ ಮತ್ತು ಪಂಜಾಬ್‌ನಂತೆ ನಗರಗಳು ಮತ್ತು ಹಳ್ಳಿಗಳಲ್ಲಿ 'ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆಯುತ್ತೇವೆ. ಸರ್ಕಾರಿ ಆಸ್ಪತ್ರೆಗಳ ಸ್ಥಿತಿ ಸುಧಾರಿಸುತ್ತದೆ ಮತ್ತು ಎಲ್ಲರಿಗೂ ಉಚಿತ ಮತ್ತು ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ" ಎಂದು ಹೇಳಿದರು.
Advertisement