ಕೇರಳ: 14 ವರ್ಷದ ಬಾಲಕನಿಗೆ ನಿಫಾ ಸೋಂಕು ದೃಢ!
ಮಲಪ್ಪುರಂ: ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕನಿಗೆ ನಿಪಾ ಸೋಂಕು ದೃಢಪಟ್ಟಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಶನಿವಾರ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಜಾರ್ಜ್, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನಿಗೆ ಪುಣೆಯ ಎನ್‌ಐವಿ (ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ) ನಿಪಾ ಸೋಂಕು ದೃಢಪಡಿಸಿದೆ ಎಂದರು.
ಸದ್ಯ ಬಾಲಕನಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತನನ್ನು ಕೋಝಿಕ್ಕೋಡ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಬಾಲಕನ ಸಂಪರ್ಕಕ್ಕೆ ಬಂದವರನ್ನು ಪತ್ತೆಹಚ್ಚುವ ಕಾರ್ಯ ಪ್ರಾರಂಭವಾಗಿದೆ. ಹೆಚ್ಚಿನ ಅಪಾಯದ ಸಂಪರ್ಕಗಳನ್ನು ಈಗಾಗಲೇ ಪ್ರತ್ಯೇಕಿಸಲಾಗಿದೆ ಮತ್ತು ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಾರ್ಜ್ ಮಾಧ್ಯಮಗಳಿಗೆ ತಿಳಿಸಿದರು.
ಈ ಹಿಂದೆ ನಾಲ್ಕು ಬಾರಿ ರಾಜ್ಯವನ್ನು ಕಾಡಿದ್ದ ನಿಪಾ ಹಾವಳಿ ತಡೆಗೆ ವಿಶೇಷ ಕ್ರಿಯಾ ಕ್ಯಾಲೆಂಡರ್ ಸಿದ್ಧಪಡಿಸಲಾಗುತ್ತಿದೆ ಎಂದು ಕೇರಳ ಸರ್ಕಾರ ಇತ್ತೀಚೆಗೆ ಪ್ರಕಟಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ