
ಭೋಪಾಲ್: ಉತ್ತರ ಭಾರತದ ಪ್ರಖ್ಯಾತ ಕನ್ವರ್ ಯಾತ್ರೆ ಆರಂಭವಾಗಿದ್ದು, ಉತ್ತರ ಪ್ರದೇಶದಲ್ಲಿ ಜಾರಿಗೆ ತಂದಿರುವ ''ನಾಮಫಲಕ ಪ್ರದರ್ಶನ'' ನಿಯಮವನ್ನು ಇದೀಗ ಮಧ್ಯ ಪ್ರದೇಶದಲ್ಲೂ ಜಾರಿಗೆ ತರಲಾಗಿದೆ.
ಮಧ್ಯ ಪ್ರದೇಶದ ಪುರಾತನ ನಗರ ಬಿಜೆಪಿ ಆಡಳಿತವಿರುವ ಉಜ್ಜಯಿನಿ ಮುನ್ಸಿಪಲ್ ಕಾರ್ಪೊರೇಶನ್ ಅಂಗಡಿ ಮಾಲೀಕರಿಗೆ ತಮ್ಮ ಹೆಸರು ಮತ್ತು ಮೊಬೈಲ್ ಸಂಖ್ಯೆಗಳನ್ನು ಕನ್ವರ್ ಯಾತ್ರೆಯ ಮಾರ್ಗದುದ್ದಕ್ಕೂ ತಿನಿಸುಗಳ ಮಾರಾಟ ಮಾಡುವ ತಮ್ಮ ಅಂಗಡಿಗಳ ಹೊರಗೆ ಪ್ರದರ್ಶಿಸುವಂತೆ ಸೂಚಿಸಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವು ಇದೇ ರೀತಿಯ ಆದೇಶದ ನೀಡಿದ ಬೆನ್ನಲ್ಲೇ ಮಧ್ಯ ಪ್ರದೇಶದಿಂದ ಈ ಆದೇಶ ಹೊರಡಿಸಲಾಗಿದೆ.
ಅಲ್ಲದೆ ಈ ನಿಯಮ ಉಲ್ಲಂಘಿಸುವವರರ ವಿರುದ್ಧ ಮೊದಲ ಬಾರಿಗೆ 2,000 ರೂಪಾಯಿ ದಂಡ ಮತ್ತು ಎರಡನೇ ಬಾರಿಗೆ ಈ ಆದೇಶವನ್ನು ಉಲ್ಲಂಘಿಸಿದರೆ 5,000 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ ಎಂದು ಉಜ್ಜಯಿನಿ ಮೇಯರ್ ಮುಖೇಶ್ ತತ್ವಾಲ್ ಶನಿವಾರ ಹೇಳಿದ್ದಾರೆ.
ಈ ಆದೇಶವು ಸುರಕ್ಷತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ ಮತ್ತು ಮುಸ್ಲಿಂ ಅಂಗಡಿ-ಮಾಲೀಕರನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಮೇಯರ್ ಸ್ಪಷ್ಟಪಡಿಸಿದ್ದಾರೆ.
ಸೆಪ್ಟೆಂಬರ್ 26, 2002 ರಂದೇ ಅಂಗಡಿಯವರು ತಮ್ಮ ಹೆಸರನ್ನು ಪ್ರದರ್ಶಿಸಲು ಉಜ್ಜಯಿನಿಯ ಮೇಯರ್-ಇನ್-ಕೌನ್ಸಿಲ್ ಪ್ರಸ್ತಾವನೆಯನ್ನು ಅನುಮೋದಿಸಿದ್ದರು. ಕಾರ್ಪೊರೇಷನ್ ಹೌಸ್ ನಂತರ ಅದನ್ನು ಆಕ್ಷೇಪಣೆಗಳು ಮತ್ತು ಔಪಚಾರಿಕತೆಗಳಿಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದು ತತ್ವಾಲ್ ಹೇಳಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ತವರೂರು ಉಜ್ಜಯಿನಿಯು ತನ್ನ ಪವಿತ್ರವಾದ ಮಹಾಕಾಲ್ (ಶಿವ) ದೇವಾಲಯಕ್ಕೆ ಹೆಸರುವಾಸಿಯಾಗಿದೆ, ವಿಶೇಷವಾಗಿ ಸೋಮವಾರದಿಂದ ಪ್ರಾರಂಭವಾಗುವ ಸಾವಾನ್ ಮಾಸದಲ್ಲಿ ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತದೆ.
Advertisement