
ನವದೆಹಲಿ: ರಾಜಧಾನಿ ದೆಹಲಿಯ ಏಮ್ಸ್ ನಲ್ಲಿ ವೈದ್ಯಕೀಯ ಕೇಂದ್ರ ಇರುವ ಜಾಗವನ್ನು ಬಲವಂತವಾಗಿ ತೆರವು ಮಾಡುವಂತೆ ಒತ್ತಾಯಿಸಿ ನಿನ್ನೆ ಸೋಮವಾರ ಸಂಜೆ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಭದ್ರತಾ ಸಿಬ್ಬಂದಿ ಅನುಚಿತವಾಗಿ ವರ್ತಿಸಿ, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್ ನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಹಾನಿಗೊಳಿಸಿದ್ದಾರೆ.
ಹೆಚ್ ಐವಿ ಪಾಸಿಟಿವ್ ರೋಗಿಗಳಿಗೆ ಚಿಕಿತ್ಸೆ ನೀಡುವ ಎಆರ್‌ಟಿ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದೆ. ಲಾಠಿ ಸಜ್ಜಿತರಾದ ಭದ್ರತಾ ಸಿಬ್ಬಂದಿ ಆಗಮಿಸಿ ರೋಗಿಗಳು ಒಳಗಿದ್ದರೂ ಕೂಡಲೇ ಜಾಗವನ್ನು ತೆರವು ಮಾಡುವಂತೆ ಹೇಳಿದರು ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿಗೆ ನಾವು ಆಕ್ಷೇಪಿಸಿದಾಗ, ವೈದ್ಯಕೀಯ ಉಪಕರಣಗಳು ಮತ್ತು ದಾಖಲೆಗಳನ್ನು ಎಸೆಯಲು ಪ್ರಾರಂಭಿಸಿದರು. ಸ್ಥಳದಲ್ಲಿ ಅವ್ಯವಸ್ಥೆ ಉಂಟಾಯಿತು. ರೋಗಿಗಳು ಭೀತರಾಗಿ ಬೇರೆ ದಾರಿಯಿಲ್ಲದೆ ಕ್ಲಿನಿಕ್ ನ್ನು ತೊರೆದರು. ಭದ್ರತಾ ಸಿಬ್ಬಂದಿ ನಮಗೆ ಬೆದರಿಕೆ ಕೂಡ ಹಾಕಿದ್ದಾರೆ. ನಮ್ಮ ರಕ್ಷಣೆಗೆ ಬಂದ ಹಿರಿಯ ಸಿಬ್ಬಂದಿಗೆ ಸಹ ಬೆದರಿಕೆ ಹಾಕಿದ್ದಾರೆ ಎಂದು ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಭದ್ರತಾ ಸಿಬ್ಬಂದಿಯನ್ನು ಏಮ್ಸ್ ಆಡಳಿತಾಧಿಕಾರಿಗಳು ಕಳುಹಿಸಿದ್ದರೇ ಅಥವಾ ಭದ್ರತಾ ಸಿಬ್ಬಂದಿಯೇ ಸ್ವತಂತ್ರವಾಗಿ ಬಂದರೇ ಎಂಬುದು ಸ್ಪಷ್ಟವಾಗಿಲ್ಲ. ಈ ಘಟನೆಯು ಒಂದು ತಿಂಗಳ ಹಳೆಯ ಆದೇಶವಾದ ಎಆರ್ ಟಿ ಕ್ಲಿನಿಕ್ ಇರುವಲ್ಲಿ ಜೆನೆರಿಕ್ ಔಷಧ ಕೌಂಟರ್‌ಗಳನ್ನು ತೆರೆಯಲು ಯೋಜಿಸಿದೆ ಎಂದು ಹೇಳಿದೆ.
ಆದರೆ, ಎಆರ್‌ಟಿ ಕೇಂದ್ರವನ್ನು ನಡೆಸುತ್ತಿರುವ ಔಷಧ ವಿಭಾಗದ ಸಿಬ್ಬಂದಿ ಆದೇಶವನ್ನು ನೀಡುವ ಮೊದಲು ತಮ್ಮೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಹೇಳಿದ್ದಾರೆ. ಎಆರ್ ಟಿ ಕೇಂದ್ರದಲ್ಲಿ ಔಷಧಿ ಕೌಂಟರ್‌ಗಳನ್ನು ತೆರೆಯುವುದರಿಂದ ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಹೆಚ್ ಐವಿ ರೋಗಿಗಳ ಗೌಪ್ಯತೆಯನ್ನು ಉಲ್ಲಂಘಿಸುತ್ತದೆ. ರೋಗಿಗಳ ಆರೈಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಿಬ್ಬಂದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Advertisement