
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ 2024-25ನೇ ಸಾಲಿನ ಬಜೆಟ್ ನಲ್ಲಿ ಬಿಹಾರಕ್ಕೆ ಬಂಪರ್ ಕೊಡುಗೆ ನೀಡಿದ್ದು, ಎನ್ ಡಿಎ ಮಿತ್ರ ಪಕ್ಷ ಜೆಡಿಯು ಈ ನಿರ್ದಿಷ್ಟ ಘೋಷಣೆಗಳನ್ನು ಸ್ವಾಗತಿಸಿದೆ.
ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಯು ವಕ್ತಾರ ಕೆ ಸಿ ತ್ಯಾಗಿ ಅವರು ಬಿಹಾರಕ್ಕೆ "ವಿಶೇಷ ಹಣಕಾಸು ನೆರವು" ನೀಡಿರುವುದನ್ನು ಶ್ಲಾಘಿಸಿದರು. ಈ ಅಭಿವೃದ್ಧಿ ಕ್ರಮಗಳು ರಾಜ್ಯವನ್ನು "ಆತ್ಮನಿರ್ಭರ್" ಮಾಡುವಲ್ಲಿ ಒಂದು ದೊಡ್ಡ ಹೆಜ್ಜೆಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಹೆದ್ದಾರಿಗಳಿಗಾಗಿ 26,000 ಕೋಟಿ ರೂ., ಪ್ರವಾಹವನ್ನು ತಗ್ಗಿಸುವ ಕ್ರಮಗಳಿಗಾಗಿ 11,500 ಕೋಟಿ ರೂ., ರಾಜ್ಯದಲ್ಲಿ ಹೊಸ ವಿಮಾನ ನಿಲ್ದಾಣ ಮತ್ತು ವೈದ್ಯಕೀಯ ಕಾಲೇಜು ಸ್ಥಾಪನೆ ಜೊತೆಗೆ ಗಂಗಾ ನದಿಗೆ ಎರಡು ಹೊಸ ಸೇತುವೆಗಳನ್ನು ಘೋಷಿಸಲಾಗಿದೆ ಎಂದು ಅವರು ಹೇಳಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಳಂದಾ ವಿಶ್ವವಿದ್ಯಾಲಯವನ್ನು ಅಭಿವೃದ್ಧಿಪಡಿಸಲು ಮತ್ತು ನಳಂದ-ರಾಜಗೀರ್ ಕಾರಿಡಾರ್ ಸೇರಿದಂತೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದಾಗಿ ಘೋಷಿಸಿದ್ದಾರೆ ಎಂದು ತ್ಯಾಗಿ ತಿಳಿಸಿದರು.
ಕೋಲ್ಕತ್ತಾ-ಅಮೃತಸರ ಕಾರಿಡಾರ್‌ಗೆ ಗಯಾ ಪ್ರಧಾನ ಕಛೇರಿಯಾಗಲಿದೆ. ಬಿಹಾರಕ್ಕೆ ಮೂರು ಹೊಸ ಎಕ್ಸ್‌ಪ್ರೆಸ್‌ವೇಗಳನ್ನು ನೀಡಲಾಗಿದೆ. ಬಜೆಟ್‌ನಲ್ಲಿ ರಾಜ್ಯದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಮತ್ತು ವಿವಿಧ ಸಂಸ್ಥೆಗಳಿಂದ ಸಾಲಕ್ಕಾಗಿ ಬಿಹಾರ ಸರ್ಕಾರದ ಮನವಿಯನ್ನು ತ್ವರಿತಗೊಳಿಸಲು ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.
Advertisement