
ಪೂಂಚ್: ಕೇಂದ್ರಾಡಳಿತ ಪ್ರದೇಶದ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಮಂಗಳವಾರ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಸೇನೆಯು ವಿಫಲಗೊಳಿಸಿದ್ದರಿಂದ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ವೈಟ್ ನೈಟ್ ಕಾರ್ಪ್ಸ್, ಬಟ್ಟಲ್ ಸೆಕ್ಟರ್ ನಲ್ಲಿ ಮುಂಜಾನೆ 3 ಗಂಟೆ ಸಮಯದಲ್ಲಿ ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ಸೇನಾ ಪಡೆಗಳು ಪರಿಣಾಮಕಾರಿಯಾಗಿ ವಿಫಲಗೊಳಿಸಿದವು. ಭಾರೀ ಗುಂಡಿನ ಚಕಮಕಿ ಸಮಯದಲ್ಲಿ, ಒಬ್ಬ ಧೈರ್ಯಶಾಲಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆಗಳು ಮುಂದುವರೆದಿದೆ ಎಂದು ಹೇಳಿತ್ತು.
ಮೂಲಗಳ ಪ್ರಕಾರ, ಕೃಷ್ಣಗತಿ ಬೆಲ್ಟ್‌ನ ಬತ್ತಲ್ ಫಾರ್ವರ್ಡ್ ಪ್ರದೇಶದಲ್ಲಿ ಉಗ್ರರನ್ನು ಪರಿಣಾಮಕಾರಿಯಾಗಿ ಹಿಮ್ಮಟ್ಟಿಸಲಾಗಿದೆ. ಈ ವೇಳೆ ತೀವ್ರವಾದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಲ್ಯಾನ್ಸ್ ನಾಯಕ್ ಸುಭಾಷ್ ಕುಮಾರ್ ಸಾವನ್ನಪ್ಪಿದ್ದಾರೆ. ಉಗ್ರರ ಕಡೆಯೂ ನಷ್ಟವಾಗಿದೆ ಎಂದು ತಿಳಿದುಬಂದಿದೆ.
ಮರಣೋತ್ತರ ಪರೀಕ್ಷೆ ನಡೆಸಿ ಯೋಧನ ದೇಹವನ್ನು ಸೇನೆಗೆ ಹಸ್ತಾಂತರಿಸಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿನ ತಿಂಗಳುಗಳಲ್ಲಿ ಜಮ್ಮುವಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿದ್ದು, ಈ ಪ್ರದೇಶದಲ್ಲಿ ಉಗ್ರಗಾಮಿತ್ವದ ಪುನರುಜ್ಜೀವನದ ಬಗ್ಗೆ ಆತಂಕವನ್ನು ಹೆಚ್ಚಿಸಿದೆ.
Advertisement