
ನವದೆಹಲಿ: ಮುಂಬರುವ ಹರಿಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಮೂಲಕ ಸಿದ್ಧತೆ ನಡೆಸಿದ್ದು, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅಡಿಯಲ್ಲಿ ನೀಡಲಾಗುತ್ತಿರುವ 5 ಕೆಜಿ ಉಚಿತ ಆಹಾರ ಧಾನ್ಯಗಳ ವಿತರಣೆಯ ಗಡುವನ್ನು 5 ವರ್ಷಗಳವರೆಗೆ ವಿಸ್ತರಣೆ ಮಾಡಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ನಲ್ಲಿ ಈ ಘೋಷಣೆ ಮಾಡಿದ್ದು, 2029ರವರೆಗೂ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅಡಿಯಲ್ಲಿ ನೀಡಲಾಗುತ್ತಿರುವ 5 ಕೆಜಿ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನು ಮುಂದುವರೆಸಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ.
ಅಲ್ಲದೆ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ನೀತಿ ಆಯೋಗ ಸಲಹೆ ನೀಡಿದೆ ಎಂದು ಹಲವು ಮಾಧ್ಯಮ ವರದಿಗಳಲ್ಲಿ ಉಲ್ಲೇಖವಾಗಿತ್ತಾದರೂ ಆಯೋಗದ ಈ ಸಲಹೆಯನ್ನು ಸರ್ಕಾರ ಸ್ವೀಕರಿಸಲಿಲ್ಲ ಎನ್ನಲಾಗಿದೆ.
ಹಣಕಾಸು ಸಚಿವಾಲಯದ ಪ್ರಕಾರ, 2020 ರಲ್ಲಿ ಈ ಯೋಜನೆಗೆ ಗರಿಷ್ಠ 5.41 ಲಕ್ಷ ಕೋಟಿ ರೂ. ಖರ್ಚಾಗಿದೆ. ಇದು 2021 ರಲ್ಲಿ 2.92 ಲಕ್ಷ ಕೋಟಿ ರೂ, 2022 ರಲ್ಲಿ 2.72 ಲಕ್ಷ ಕೋಟಿ ರೂ, 2023 ರಲ್ಲಿ 2.12 ಲಕ್ಷ ಕೋಟಿ ರೂ. ಮತ್ತು 2023 ರಲ್ಲಿ 2.05 ಲಕ್ಷ ಕೋಟಿ ರೂ. ಆಗಿದೆ.
ಕೇಂದ್ರ ಸರ್ಕಾರದ ಪ್ರಕಾರ, ದೇಶಾದ್ಯಂತ ಸುಮಾರು 80 ಕೋಟಿ ಜನರು ಈ ಯೋಜನೆಯ ಲಾಭ ಪಡೆಯುತ್ತಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ಬಜೆಟ್ ಮೇಲೆ ಹೊರೆ ಎಂದು ಪರಿಗಣಿಸಿದ್ದಾರೆ ಮತ್ತು ಐದು ವರ್ಷಗಳ ಅವಧಿಯಲ್ಲಿ ಸುಮಾರು 10 ಲಕ್ಷ ಕೋಟಿ ರೂ. ಖರ್ಚು ನಿರೀಕ್ಷಿಸಲಾಗಿದೆ.
ಉಚಿತ ಧಾನ್ಯ ವಿತರಣೆ ವಿಸ್ತರಣೆ ಏಕೆ?
ಚುನಾವಣೆ ನಡೆಯುವ ಮೂರೂ ರಾಜ್ಯಗಳಲ್ಲಿ 35 ಲಕ್ಷಕ್ಕೂ ಕುಟುಂಬಗಳು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಫಲಾನುಭವಿಗಳನ್ನು ಸಂಖ್ಯಾತ್ಮಕವಾಗಿ ನೋಡಿದರೆ ಸುಮಾರು 1.59 ಕೋಟಿ ಇದ್ದಾರೆ. ಭಾರತ ಸರ್ಕಾರದ ಪ್ರಕಾರ, ಮಹಾರಾಷ್ಟ್ರದಲ್ಲಿ 1 ಕೋಟಿ 10 ಲಕ್ಷ ಜನರು ಉಚಿತ ಪಡಿತರ ಪ್ರಯೋಜನವನ್ನು ಪಡೆಯುತ್ತಾರೆ. ಜಾರ್ಖಂಡ್‌ನಲ್ಲಿ ಈ ಸಂಖ್ಯೆ ಸುಮಾರು 34 ಲಕ್ಷ. ಹರಿಯಾಣದಲ್ಲಿ ಪಡಿತರ ಪ್ರಯೋಜನ ಪಡೆಯುವವರ ಸಂಖ್ಯೆ ಸುಮಾರು 12 ಲಕ್ಷ.
3 ತಿಂಗಳ ಅವಧಿಯಲ್ಲಿ ಮೂರು ರಾಜ್ಯಗಳಲ್ಲಿ ಚುನಾವಣೆ
ಇನ್ನು 3 ತಿಂಗಳ ನಂತರ ಈ ಮೂರು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ. 3 ರಾಜ್ಯಗಳಲ್ಲಿ 2 (ಮಹಾರಾಷ್ಟ್ರ ಮತ್ತು ಹರಿಯಾಣ) ಪ್ರಸ್ತುತ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಇದ್ದರೆ, ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವಿದೆ.
Advertisement