
ಡೆಹ್ರಾಡೂನ್: ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕನ್ವಾರಿಯಾ ಯಾತ್ರಿಯನ್ನು ವಾಟರ್ ಪೊಲೀಸ್ ರಕ್ಷಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರಾಖಂಡದ ಹರಿದ್ವಾರದಲ್ಲಿ ಈ ಘಟನೆ ನಡೆದಿದ್ದು, ಹರಿದ್ವಾರದ ಕಾಂಗ್ರಾ ಘಾಟ್‌ನಲ್ಲಿ ಸ್ನಾನ ಮಾಡುತ್ತಿದ್ದಾಗ, ದೆಹಲಿಯಿಂದ ಬಂದ ಶಿವಭಕ್ತರೊಬ್ಬರು (ಕನ್ವಾರಿಯಾ) ಗಂಗಾನದಿಯ ಪ್ರಬಲ ಪ್ರವಾಹದ ನೀರಿನಲ್ಲಿ ಸಿಲುಕಿ ಕೊಚ್ಚಿ ಹೋದರು.
ಇದನ್ನು ಗಮನಿಸಿದ ಉತ್ತರಾಖಂಡದ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ವಾಟರ್ ಪೊಲೀಸರು ಕೂಡಲೇ ನೀರಿಗೆ ಧುಮುಕಿ ಕೊಚ್ಚಿ ಹೋಗುತ್ತಿದ್ದ ಕನ್ವಾರಿಯಾ ಯಾತ್ರಿಯನ್ನು ರಕ್ಷಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಉತ್ತರಾಖಂಡ್ ಪೋಲೀಸ್ ಎಸ್‌ಡಿಆರ್‌ಎಫ್ ಜವಾನ್ ಎಚ್‌ಸಿ ಆಶಿಕ್ ಅಲಿ, ಶುಭಂ ಮತ್ತು ವಾಟರ್ ಪೊಲೀಸ್ ಸನ್ನಿ ಕುಮಾರ್ ಕೊಂಚವೂ ಕೂಡ ತಡ ಮಾಡದೇ ನೀರಿಗೆ ಧುಮುಕಿ ಕ್ಷಣಮಾತ್ರದಲ್ಲಿ ಮುಳುಗುತ್ತಿದ್ದ ಕನ್ವಾರಿಯಾ ಪವನ್ ಕುಮಾರ್ ರನ್ನು ಹಿಡಿದು ದಡಕ್ಕೆ ಎಳೆದುತಂದಿದ್ದಾರೆ.
ಇವಿಷ್ಟೂ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಇದೇ ವಿಡಿಯೋವನ್ನು ಉತ್ತರಾಖಂಡ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಸಿಬ್ಬಂದಿಗಳ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹಿಂದೂ ತಿಂಗಳ ಶ್ರಾವಣದಲ್ಲಿ, ಸಾವಿರಾರು ಕನ್ವಾರಿಯಾ, ಶಿವನ ಭಕ್ತರು, ಗಂಗೆಯ ಪವಿತ್ರ ನೀರನ್ನು ತರಲು ಉತ್ತರಾಖಂಡದ ಗಂಗೋತ್ರಿ, ಗೌಮುಖ ಮತ್ತು ಹರಿದ್ವಾರ ಮತ್ತು ಬಿಹಾರದ ಸುಲ್ತಂಗಂಜ್‌ಗೆ ಭೇಟಿ ನೀಡುತ್ತಾರೆ.
Advertisement