
ನವದೆಹಲಿ: 'ಪ್ರತಿ ರಾಜ್ಯವನ್ನು ಬಜೆಟ್ ನಲ್ಲಿ ಹೆಸರಿಸಲು ಸಾಧ್ಯವಿಲ್ಲ, ಆಯಾ ರಾಜ್ಯಗಳಿಗೆ ಸಿಗಬೇಕಾದ ಮನ್ನಣೆ ಸಿಗುತ್ತದೆ. ಹೆಸರಿಸದೇ ಹೋದರೆ, ಸರ್ಕಾರದ ನ ಕಾರ್ಯಕ್ರಮಗಳು ಆ ರಾಜ್ಯಗಳಿಗೆ ಹೋಗುವುದಿಲ್ಲ ಎಂದರ್ಥವೇ? ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.
ಕೇಂದ್ರ ಬಜೆಟ್ 2024ರಲ್ಲಿ ತಮ್ಮ ರಾಜ್ಯಕ್ಕೆ ಮನ್ನಣೆ ಸಿಕ್ಕಿಲ್ಲ ಎಂದು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ತಕರಾರು ಎತ್ತಿರುವಂತೆಯೇ ಇದಕ್ಕೆ ರಾಜ್ಯಸಭೆಯಲ್ಲಿ ಉತ್ತರ ನೀಡಿರುವ ನಿರ್ಮಲಾ ಸೀತಾರಾಮನ್, ''ಪ್ರತಿ ಬಜೆಟ್‌ನಲ್ಲಿ, ಈ ದೇಶದ ಪ್ರತಿಯೊಂದು ರಾಜ್ಯವನ್ನು ಹೆಸರಿಸಲು ನಿಮಗೆ ಅವಕಾಶ ಸಿಗುವುದಿಲ್ಲ... ಸಚಿವ ಸಂಪುಟವು ಮಹಾರಾಷ್ಟ್ರದ ವಂದಾವನ್ ಬಂದರು ಕುರಿತು ಒಂದು ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ನಿನ್ನೆಯ ಬಜೆಟ್‌ನಲ್ಲಿ ಮಹಾರಾಷ್ಟ್ರದ ಹೆಸರನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇದರರ್ಥ ಮಹಾರಾಷ್ಟ್ರವನ್ನು ನಿರ್ಲಕ್ಷಿಸಲಾಗಿದೆ ಎಂದರ್ಥವೇ? ಎಂದು ಹೇಳಿದರು.
ಅಂತೆಯೇ ಬಜೆಟ್ ಭಾಷಣದಲ್ಲಿ ನಿರ್ದಿಷ್ಟ ರಾಜ್ಯವನ್ನು ಹೆಸರಿಸದೇ ಹೋದರೆ, ಕೇಂದ್ರ ಸರ್ಕಾರದ ನ ಕಾರ್ಯಕ್ರಮಗಳು ಈ ರಾಜ್ಯಗಳಿಗೆ ಹೋಗುವುದಿಲ್ಲ ಎಂದು ಅರ್ಥವೇ? ಇದು ನಮ್ಮ ರಾಜ್ಯಗಳಿಗೆ ಏನನ್ನೂ ನೀಡಿಲ್ಲ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸಲು ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳ ಉದ್ದೇಶಪೂರ್ವಕ ಪ್ರಯತ್ನವಾಗಿದೆ. ಇದೊಂದು ಅತಿರೇಕದ ಆರೋಪ ಎಂದು ನಿರ್ಮಲಾ ಸೀತಾರಾಮನ್ ಕಿಡಿಕಾರಿದ್ದಾರೆ.
ಬಿಹಾರ, ಆಂಧ್ರ ಪ್ರದೇಶದ ತಟ್ಟೆಗೆ ಮಾತ್ರ ಅನ್ನ
ಬಜೆಟ್ ನಲ್ಲಿ ಕರ್ನಾಟಕ ಹಲವಾರು ರಾಜ್ಯಗಳಿಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟದ ಸದಸ್ಯರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಖರ್ಗೆ, ಕೇವಲ ಬಿಹಾರ ಹಾಗೂ ಆಂಧ್ರಪ್ರದೇಶದ ತಟ್ಟೆಗಳಿಗೆ ಮಾತ್ರ ಅನ್ನ ಬಡಿಸಲಾಗಿದೆ. ಉಳಿದ ರಾಜ್ಯಗಳ ತಟ್ಟೆಗಳನ್ನು ಹಾಗೆಯೇ ಖಾಲಿ ಬಿಡಲಾಗಿದೆ. ಇದು ಕೇವಲ ಕುರ್ಚಿಯನ್ನು ಉಳಿಸಿಕೊಳ್ಳುವುದಕ್ಕಾಗಿ ರೂಪಿಸಲಾಗಿರುವ ಬಜೆಟ್ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಿರ್ಮಲಾ ಸೀತಾರಾಮನ್ ಗೆ ಮಾತಾಜೀ ಅಂತ ಕರೆದ ಖರ್ಗೆ
ಇತ್ತ ಕೇಂದ್ರ ಸರ್ಕಾರದ ಬಜೆಟ್ ತಾರತಮ್ಯದಿಂದ ಕೂಡಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಜೆಟ್ ನಲ್ಲಿ ಕೇವಲ ಬಿಹಾರ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಉಳಿದ ರಾಜ್ಯಗಳನ್ನು ನಿರ್ಲಕ್ಷಿಸಲಾಗಿದೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿಗಳು, ನಿಮ್ಮ ಆರೋಪಕ್ಕೆ ವಿತ್ತ ಸಚಿವರು ಉತ್ತರಿಸಲಿದ್ದಾರೆ ಎಂದಾಗ ಖರ್ಗೆಯವರು ನಾನು ಹೇಳೋದನ್ನು ಹೇಳುತ್ತೇನೆ. ನಮ್ಮ ಮಾತಾಜೀಯವರು (ನಿರ್ಮಲಾ ಸೀತಾರಾಮನ್) ಉತ್ತರ ಕೊಡುವುದರಲ್ಲಿ ನಿಷ್ಣಾತರು ಎಂದರು.
ಪ್ರತಿಪಕ್ಷಗಳ ಸಭಾತ್ಯಾಗ
ಇನ್ನು ಸಚಿವೆ ನಿರ್ಮಲಾ ಸೀತಾರಾಮನ್ ರ ಬಜೆಟ್ ಅನ್ನು "ತಾರತಮ್ಯ" 2024 ಎಂದು ಕರೆದ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ಸಭಾತ್ಯಾಗ ಮಾಡಿದವು. ನಾವು ಇದನ್ನು ಖಂಡಿಸುತ್ತೇವೆ ಮತ್ತು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪ್ರತಿಭಟನೆ ನಡೆಸುತ್ತವೆ... ಸಮತೋಲನ ಇಲ್ಲದಿದ್ದರೆ ಅಭಿವೃದ್ಧಿ ಹೇಗೆ ಸಂಭವಿಸುತ್ತದೆ? ಎಂದು ಖರ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಧಂಕರ್ ಅಸಮಾಧಾನ
ಪ್ರತಿಪಕ್ಷಗಳ ಸಭಾತ್ಯಾಗದ ನಂತರ, ರಾಜ್ಯಸಭಾ ಸಭಾಪತಿ ಜಗದೀಪ್ ಧಂಖರ್ ಅವರ ನಡವಳಿಕೆಯನ್ನು ಟೀಕಿಸಿದರು, ಅಡ್ಡಿಪಡಿಸುವಿಕೆಯನ್ನು ರಾಜಕೀಯ ತಂತ್ರವಾಗಿ ಅಸ್ತ್ರಗೊಳಿಸಿದರೆ, ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯವಿದೆ ಎಂದು ಪ್ರತಿಪಾದಿಸಿದರು.
Advertisement