
ನವದೆಹಲಿ: ಡಿಜಿಟಲ್ ಯುಗದಲ್ಲಿ ವಂಚಕರು ಹಣ ದೋಚುವುದಕ್ಕೆ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈ ಪೈಕಿ digital arrest ಎಂಬ ಬೆದರಿಕೆ ಮಾರುಕಟ್ಟೆಗೆ ಬಂದಿರುವ ಹೊಸ ಸರಕು!
ಈ ಡಿಜಿಟಲ್ ಅರೆಸ್ಟ್ ಎಂಬ ಬೆದರಿಕೆ ಬಲೆಗೆ ಬಿದ್ದ ವೈದ್ಯೆಯೊಬ್ಬರು ಬರೊಬ್ಬರಿ 59 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಡಿಜಿಟಲ್ ಅರೆಸ್ಟ್ ಎಂಬ ಹೊಸ ವಂಚನೆಯ ಪ್ರಕಾರವನ್ನು ದೆಹಲಿ ಎನ್ ಸಿಆರ್ ನಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ.
ನೋಯ್ಡಾ ಸೆಕ್ಟರ್ 77 ರ ನಿವಾಸಿ ಡಾ.ಪೂಜಾ ಗೋಯಲ್ ಗೆ ಜುಲೈ 13 ರಂದು ಬಂದ ಕರೆಯಲ್ಲಿ ವ್ಯಕ್ತಿಯೋರ್ವ ತನ್ನನ್ನು ತಾನು ಭಾರತೀಯ ದೂರವಾಣಿ ನಿಯಂತ್ರಣ ಪ್ರಾಧಿಕಾರದ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ವೈದ್ಯೆಯ ಫೋನ್ ಪೋರ್ನ್ ವೀಡಿಯೊಗಳನ್ನು ಪ್ರಸಾರ ಮಾಡಲು ಬಳಕೆಯಾಗುತ್ತಿದೆ ಎಂದು ಹೇಳಿದ್ದ. ವೈದ್ಯೆ ಇದನ್ನು ನಿರಾಕರಿಸಿದ್ದರು. ಆದರೆ ಕರೆ ಮಾಡಿದ ವ್ಯಕ್ತಿ ವಿಡಿಯೋ ಕಾಲ್ ಸ್ವೀಕರಿಸುವಂತೆ ವೈದ್ಯೆಗೆ ಹೇಳಿ, ಪೋರ್ನ್ ಹಂಚಿದ್ದಕ್ಕೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭೀತಿ ಹುಟ್ಟಿಸಿದ್ದ. ಅಷ್ಟೇ ಅಲ್ಲದೇ ಡಿಜಿಟಲ್ ಅರೆಸ್ಟ್ (ಡಿಜಿಟಲ್ ಬಂಧನ) ಗೆ ಒಳಗಾಗಿದ್ದೀರ ಎಂದು ಬೆದರಿಕೆ ಹಾಕಿದ್ದ. ಸಮಸ್ಯೆಯಿಂದ ಪಾರಾಗಬೇಕಾದರೆ 59 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ಹೇಳಿ ವೈದ್ಯೆಯನ್ನು ಯಾಮಾರಿಸಿದ್ದ.
ಡಿಜಿಟಲ್ ಬಂಧನದ ಹಿನ್ನೆಲೆಯಲ್ಲಿ 48 ಗಂಟೆಗಳ ಸತತ ವಿಚಾರಣೆಯ ಹಿನ್ನೆಲೆಯಲ್ಲಿ ವೈದ್ಯೆಗೆ ಭೀತಿ ಉಂಟಾಗಿ, ಆಕೆ ಕರೆ ಮಾಡಿದ್ದ ವ್ಯಕ್ತಿ ಹೇಳಿದಂತೆ ಕೇಳಲು ಆರಂಭಿಸಿದ್ದಾರೆ. ಬಳಿಕ ಆತನ ಬೇಡಿಕೆಯಂತೆ 59 ಲಕ್ಷ 54 ಸಾವಿರ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಈ ಬಳಿಕ ತನಗೆ ಮೋಸವಾಗಿದೆ ಎಂದು ತಿಳಿದ ವೈದ್ಯೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಎಂಎಸ್ ಗೋಯಲ್ ಯಾವ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ವಿವರಗಳು ತಮ್ಮ ಬಳಿ ಇವೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಸೈಬರ್ ಕ್ರೈಂ) ವಿವೇಕ್ ರಂಜನ್ ರೈ ಹೇಳಿದ್ದು ಅವುಗಳನ್ನು ಪರಿಶೀಲಿಸಲಾಗುತ್ತಿದ್ದು, ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.
ಜನರನ್ನು ಹೆದರಿಸಲು ಮತ್ತು ನಂತರ ಅವರನ್ನು ವಂಚಿಸಲು ಸ್ಕ್ಯಾಮ್‌ಸ್ಟರ್‌ಗಳು ಡಿಜಿಟಲ್ ಬಂಧನ ಎಂಬ ತಂತ್ರವನ್ನು ವ್ಯಾಪಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಂಚಕರು ಕಾನೂನು ಜಾರಿ ಅಧಿಕಾರಿಗಳಂತೆ ಪೋಸ್ ನೀಡುತ್ತಾರೆ. ಅವರು ನಿಜವಾದ ಅಧಿಕಾರಿಗಳು ಎಂದು ಟಾರ್ಗೆಟ್ ಮಾಡಲಾದ ವ್ಯಕ್ತಿಗಳಿಗೆ ಮನವರಿಕೆ ಮಾಡಲು ನಕಲಿ ಐಡಿಗಳನ್ನು ಹಂಚಿಕೊಳ್ಳುತ್ತಾರೆ. ಇದಕ್ಕೂ ಮುನ್ನ ದೆಹಲಿಯ ಐಷಾರಾಮಿ ಚಿತ್ತರಂಜನ್ ಪಾರ್ಕ್ ಪ್ರದೇಶದ 72 ವರ್ಷದ ಮಹಿಳೆಯೊಬ್ಬರಿಗೆ ₹ 83 ಲಕ್ಷ ರೂಪಾಯಿ ವಂಚಿಸಲಾಗಿತ್ತು. ಡಾ ಪೂಜಾ ಗೋಯಲ್ ಅವರಂತೆ, ಕೃಷ್ಣ ದಾಸ್‌ಗುಪ್ತಾ ಅವರ ಫೋನ್ ಅನ್ನು ಅಪರಾಧ ಚಟುವಟಿಕೆಗಳಿಗೆ ಬಳಸಲಾಗಿದೆ ಎಂದು ಹೇಳಿ 12 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.
"ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅನುಮಾನಾಸ್ಪದ ಕರೆ ಹೇಳಿಕೊಂಡರೆ ಅಥವಾ ವೈಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಕೇಳಿದರೆ, ನಾಗರಿಕರು ತಕ್ಷಣ ಅದನ್ನು ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಸೆಲ್‌ಗೆ ವರದಿ ಮಾಡಬೇಕು" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement