ಬೆಂಗಳೂರು: ಸೈಬರ್ ಕ್ರೈಂಗೆ 14.57 ಲಕ್ಷ ರೂ. ಕಳೆದುಕೊಂಡ ವಕೀಲೆ; ಕ್ಯಾಮರಾ ಮುಂದೆ ಬೆತ್ತಲಾಗುವಂತೆ ಮಾಡಿದ ವಂಚಕರು!

ಸೈಬರ್ ಕ್ರೈಂಗೆ ಬೆಂಗಳೂರಿನ ವಕೀಲೆಯೊಬ್ಬರು ಮೋಸಕ್ಕೀಡಾಗಿದ್ದಾರೆ. ವಕೀಲೆಯೊಬ್ಬರು 14 ಲಕ್ಷ ರೂಪಾಯಿ ವಂಚನೆಗೆ ಒಳಗಾಗಿರುವುದು ಮಾತ್ರವಲ್ಲದೆ, ಸೈಬರ್ ವಂಚಕರು ಆಕೆ ಕ್ಯಾಮೆರಾ ಎದುರೇ ಉಡುಪು ಕಳಚುವಂತೆ ಮಾಡಿರುವ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸೈಬರ್ ಕ್ರೈಂಗೆ ಬೆಂಗಳೂರಿನ ವಕೀಲೆಯೊಬ್ಬರು ಮೋಸ ಹೋದ ಘಟನೆಯಿದು. ವಕೀಲೆ 14 ಲಕ್ಷ ರೂಪಾಯಿ ಕಳೆದುಕೊಂಡಿದ್ದು ಮಾತ್ರವಲ್ಲದೆ, ಕ್ಯಾಮೆರಾ ಎದುರೇ ಉಡುಪು ಕಳಚುವಂತೆ ಮಾಡಿ ಎರಡು ದಿನ ಅಕ್ಷರಶಃ ಸೈಬರ್ ಒತ್ತೆಯಾಳಾಗಿದ್ದರು ಎಂದರೆ ತಪ್ಪಾಗಲಾರದು.

ವಕೀಲೆಯ ಬೆತ್ತಲೆ ವಿಡಿಯೋಗಳನ್ನು ಬಳಸಿಕೊಂಡು, ಬ್ಲ್ಯಾಕ್‌ಮೇಲ್ ಮೂಲಕ ಮತ್ತೆ 10 ಲಕ್ಷ ರೂ ಸುಲಿಗೆ ಮಾಡಲು ಪ್ರಯತ್ನಿಸಿದ್ದಾರೆ. ಕಾನೂನು ಹಾಗೂ ಸೈಬರ್ ವಂಚನೆಯ ಕುರಿತಾದ ತಿಳಿವಳಿಕೆ ಹೊಂದಿದ್ದರೂ, ಸ್ಕ್ಯಾಮರ್‌ಗಳ ಜಾಲಕ್ಕೆ ಬಿದ್ದ ಮಹಿಳೆ ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಡೆದ ಘಟನೆಯೇನು?: ಮುಂಬಯಿ ಸೈಬರ್ ಕ್ರೈಂ ತಂಡ ಅಥವಾ ಸಿಬಿಐ ಎಂದು ಹೇಳಿಕೊಂಡ ದುಷ್ಕರ್ಮಿಗಳ ತಂಡವು 29 ವರ್ಷದ ವಕೀಲೆಯನ್ನು ಎರಡು ದಿನವಿಡೀ ವಿಡಿಯೋ ಕ್ಯಾಮೆರಾ ಅಥವಾ ಮೈಕ್ರೋಫೋನ್ ಎದುರು ಇರುವಂತೆ ಮಾಡಿದೆ. ಮುಂಬಯಿ ಕ್ರೈಂ ಬ್ರ್ಯಾಂಚ್ ಹಾಗೂ ಸಿಬಿಐ ಎಂದು ಹೇಳಿಕೊಂಡು ಕರೆ ಮಾಡುವ ವಂಚಕರ ತಂಡಗಳು ಸಕ್ರಿಯವಾಗಿವೆ. ವಕೀಲೆ ಇಂಥದ್ದೇ ಜಾಲಕ್ಕೆ ಬಿದ್ದಿದ್ದಾರೆ. ಏಪ್ರಿಲ್ 3ರ ಬುಧವಾರ ಫೆಡ್ ಎಕ್ಸ್‌ನಿಂದ ಮಾತನಾಡುತ್ತಿರುವುದು ಎಂಬ ಕರೆ ಅವರಿಗೆ ಬಂದಿತ್ತು. ನಿಮ್ಮ ಹೆಸರಿಗೆ ಬಂದಿದ್ದ ಪಾರ್ಸೆಲ್ ವಾಪಸ್ ಬಂದಿದೆ ಎಂದು ಅವರು ಹೇಳಿದ್ದರು. ಮುಂಬಯಿಯಿಂದ ಥಾಯ್ಲೆಂಡ್‌ಗೆ ಪಾರ್ಸೆಲ್ ಕಳುಹಿಸಲಾಗಿದ್ದು, ಅದರಲ್ಲಿ ಐದು ಪಾಸ್‌ಪೋರ್ಟ್, ಮೂರು ಕ್ರೆಡಿಟ್ ಕಾರ್ಡ್‌ಗಳು ಹಾಗೂ ನಿಷೇಧಿತ ಮಾದಕವಸ್ತು ಎಂಡಿಎಂಎ 140 ಮಾತ್ರೆಗಳಿವೆ ಎಂದು ತಿಳಿಸಿದ್ದರು.

ಆ ಪಾರ್ಸೆಲ್‌ಗೂ ತಮಗೂ ಯಾವುದೇ ಸಂಬಂಧ ಇಲ್ಲ ಎಂದು ವಕೀಲೆ ಹೇಳಿದರು. ಆಗ ಪಾರ್ಸೆಲ್ ಕಂಪೆನಿ ಸೋಗಿನಲ್ಲಿ ಮಾತನಾಡಿದ್ದ ವಂಚಕರು, ತಮ್ಮ ಹೆಸರಿನಲ್ಲಿ ವಂಚನೆ ನಡೆದಿರುವ ಬಗ್ಗೆ ಮುಂಬಯಿಯ ಸೈಬರ್ ಟೀಮ್‌ಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ಇದಕ್ಕೆ ವಕೀಲೆ ಒಪ್ಪಿದಾಗ, ಕರೆಯನ್ನು 'ಸೈಬರ್ ಅಪರಾಧ ತಂಡ'ಕ್ಕೆ ವರ್ಗಾಯಿಸಿದ್ದರು.

ಆಚೆ ಕಡೆಯಿಂದ ಮಾತನಾಡಿದ ವ್ಯಕ್ತಿ, ಸ್ಕೈಪ್ ಆಪ್ ಡೌನ್‌ಲೋಡ್ ಮಾಡಿ, ವಿಡಿಯೋ ಕಾಲ್‌ಗೆ ಬರುವಂತೆ ಸೂಚಿಸಿದ್ದ.

"ನಾನು ಸ್ಕೈಪ್ ಡೌನ್‌ಲೋಡ್ ಮಾಡಿ, ಅವರನ್ನು ಸಂಪರ್ಕಿಸಿದೆ. ಅವರು ನನ್ನ ಬಳಿ ಅಕ್ರಮ ಪಾರ್ಸೆಲ್ ಬಗ್ಗೆ ವಿಚಾರಿಸಿದರು. ಜತೆಗೆ ನನ್ನ ಆಧಾರ್ ಕಾರ್ಡ್ ಮಾಹಿತಿ ಕೇಳಿದರು. ಇದರ ನಂತರ ಅವರ 'ಉನ್ನತ ಅಧಿಕಾರಿ'ಗಳ ಮೂಲಕ ಅದನ್ನು ಪರಿಶೀಲಿಸಿದರು. ನನ್ನ ಆಧಾರ್ ಕಾರ್ಡ್ ನ್ನು ಮಾನವ ಕಳ್ಳಸಾಗಣೆ ಹಾಗೂ ಡ್ರಗ್ಸ್ ಸಾಗಣೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಹೈ ಅಲರ್ಟ್ ನೀಡಲಾಗಿದೆ ಎಂದರು. ಬಳಿಕ ಸ್ಕೈಪ್ ಕರೆಯನ್ನು ಅಭಿಷೇಕ್ ಚೌಹಾಣ್ ಎಂಬ ಹಿರಿಯ ಸಿಬಿಐ ಅಧಿಕಾರಿಗೆ ವರ್ಗಾಯಿಸಿದರು. ನನ್ನ ಕ್ಯಾಮೆರಾ ಆನ್ ಮಾಡಿ ಮಾತನಾಡುವಂತೆ ಅವರು ನಿರ್ದೇಶಿಸಿದರು" ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ವಿವರ ಪಡೆದುಕೊಂಡ 'ಅಧಿಕಾರಿ'

ಈ 'ಅಧಿಕಾರಿ' ಎಂದು ಹೇಳಿಕೊಂಡ ವ್ಯಕ್ತಿ ವಕೀಲೆ ಬಳಿ ಖಾತೆಯಲ್ಲಿರುವ ಹಣ, ಸಂಬಳ, ಹೂಡಿಕೆ ಸೇರಿದಂತೆ ಎಲ್ಲಾ ವಿವರಗಳನ್ನು ಕೇಳಿ ಬರೆದುಕೊಂಡ. ತನಿಖೆ ಪೂರ್ಣಗೊಳ್ಳುವವರೆಗೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂಬ ಪ್ರತಿಜ್ಞೆ ತೆಗೆಸಿಕೊಳ್ಳುವ ಗೋಪ್ಯತಾ ಪ್ರಮಾಣ ಓದುವಂತೆ ಸೂಚಿಸಿದ್ದ. ಈ ಬಗ್ಗೆ ಕುಟುಂಬ ಅಥವಾ ಪೊಲೀಸರ ಬಳಿ ಮಾತನಾಡಬಹುದೇ ಎಂದು ಮಹಿಳೆ ಕೇಳಿದಾಗ, 'ನಿಮ್ಮ ಸುರಕ್ಷತೆ' ದೃಷ್ಟಿಯಿಂದ ಬೇಡ ಎಂದು ಆತ ಹೇಳಿದ್ದ. ಉದ್ಯೋಗಿಗಳ ವಿವರ ಬಳಸಿಕೊಂಡು ಭಾರತದ ಪ್ರಮುಖ ಬ್ಯಾಂಕ್ ಒಂದಕ್ಕೆ ಸೇರಿದವರು ಅಕ್ರಮ ಹಣ ವರ್ಗಾವಣೆ ಮತ್ತು ಮಾನವ ಕಳ್ಳಸಾಗಣೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ನಂಬುವಂತೆ ಕಥೆ ಹೆಣೆದ.

ಈ ಹೈ ಪ್ರೊಫೈಲ್ ಪ್ರಕರಣದಲ್ಲಿ ಪೊಲೀಸರು ಮತ್ತು ರಾಜಕಾರಣಿಗಳು ಭಾಗಿಯಾಗಿದ್ದಾರೆ. ಅವರ ಜತೆ ನಾನು ಸಹಕರಿಸಬೇಕು. ಈ ಬಗ್ಗೆ ಯಾರ ಬಳಿಯೂ ಮಾತನಾಡಬಾರದು ಎಂದು ಹೇಳಿದ್ದ. ಇದಕ್ಕಾಗಿ ನಾನು ಬುಧವಾರ ಇಡೀ ದಿನ ನಿಗಾವಣೆಯಲ್ಲಿ ಇರಬೇಕು. ಹೀಗಾಗಿ ನನ್ನ ಕ್ಯಾಮೆರಾ ಆನ್‌ನಲ್ಲಿ ಇರಿಸಿ, ಸ್ಕ್ರೀನ್ ಶೇರ್ ಮಾಡಬೇಕು. ನಾನು ಯಾರಿಗಾದರೂ ಕರೆ ಮಾಡುವುದು ಅಥವಾ ಮೆಸೇಜ್ ಕಳುಹಿಸುತ್ತಿದ್ದೀನಾ ಎಂಬುದು ಗೊತ್ತಾಗಬೇಕು ಎಂದು ಹೇಳಿದ್ದ. ಇಡೀ ಹಗಲು ಮತ್ತು ರಾತ್ರಿ ನನ್ನ ಮೇಲೆ ನಿಗಾ ಇರಿಸಿದ್ದರು. ನಾನು ಕ್ಯಾಮೆರಾ ಆನ್ ಮಾಡಿಯೇ ಮಲಗಿದ್ದೆ" ಎಂದು ಅವರು ಎಫ್‌ಐಆರ್‌ನಲ್ಲಿ ವಿವರಿಸಿದ್ದಾರೆ.

ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ

ಮರುದಿನ ಮಾತನಾಡಿದ 'ಸಿಬಿಐ ಅಧಿಕಾರಿ' ಎಂದು ಹೇಳಿಕೊಂಡ ಚೌಹಾಣ್, ಆರ್‌ಬಿಐ ಮಾರ್ಗಸೂಚಿ ಪ್ರಕಾರ, ವರ್ಗಾವಣೆಯು ಕಾನೂನುಬದ್ಧವಾಗಿದೆಯೇ ಎಂಬುದನ್ನು ತಿಳಿಯಲು ತನ್ನ ಖಾತೆಯಲ್ಲಿನ ಎಲ್ಲ ಹಣವನ್ನೂ 'ಡಮ್ಮಿ' ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದ. ಬ್ಯಾಂಕ್ ಶಾಖೆಗೆ ಹೋಗಿ, ಅದೇ ಬ್ಯಾಂಕ್‌ನಲ್ಲಿದ್ದ ಮತ್ತೊಂದು ಖಾತೆಗೆ 10.79 ಲಕ್ಷ ರೂ ಹಣವನ್ನು ವಕೀಲೆ ವರ್ಗಾಯಿಸಿದ್ದರು. ಇಡೀ ಪ್ರಕ್ರಿಯೆ ಉದ್ದಕ್ಕೂ ಆಕೆ ಕರೆಯನ್ನು ಕಟ್ ಮಾಡುವಂತೆ ಇರಲಿಲ್ಲ ಮತ್ತು ಆಕೆಯ ಫೋನ್ ಸ್ಕ್ರೀನ್‌ ಆತನಿಗೆ ಕಾಣುವಂತೆ ಇರಬೇಕಿತ್ತು.

ಹಣ ವರ್ಗಾವಣೆಯಾದ ಬಳಿಕ, ಬಹುತೇಕ ವರ್ಗಾವಣೆಯನ್ನು ಪರಿಶೀಲಿಸಲಾಗಿದೆ. ಆದರೆ ಕ್ರೆಡಿಟ್ ಕಾರ್ಡ್ ವ್ಯವಹಾರಗಳಲ್ಲಿ ಕೆಲವು ಅವ್ಯವಹಾರ ಆಗಿದೆ ಎಂದು ಹೇಳಿದ್ದ. ಅದಕ್ಕಾಗಿ ಆಪ್ ಒಂದನ್ನು ಡೌನ್‌ಲೋಡ್ ಮಾಡಿಸಿದ್ದ. ಅದರಲ್ಲಿ 5 ಸಾವಿರ ಡಾಲರ್ (ಅಂದಾಜು 4.16 ಲಕ್ಷ ರೂ) ಮೊತ್ತದ ಬಿಟ್‌ಕಾಯಿನ್ ಖರೀದಿಸಲು ವಂಚಕರು ಪ್ರಯತ್ನಿಸಿದ್ದರು. ಆದರೆ ಆ ವಹಿವಾಟು ವಿಫಲಗೊಂಡಿತ್ತು.

ಬಳಕೆ ಮಿತಿಯನ್ನು ಬದಲಿಸುವಂತೆ ವಕೀಲೆಗೆ ಆತ ಸೂಚಿಸಿದ್ದ. ಆದರೆ ಅದೆಲ್ಲವೂ ವಿಫಲವಾಗಿದ್ದವು. ಆಕೆಯ ಹೆಸರು ದುರ್ಬಳಕೆಯಾಗದಂತೆ ತಡೆಯಲು ಅದರ ಫೋಟೋಗಳನ್ನು ಕಳುಹಿಸುವಂತೆ ಹೇಳಿದ್ದ. ಗುರುವಾರ ಮುಂಜಾನೆ ಶಾಪಿಂಗ್ ತಾಣವೊಂದರಿಂದ 2.04 ಲಕ್ಷ ರೂ ಮತ್ತು 1.73 ಲಕ್ಷ ರೂ ಮೊತ್ತದ ವಹಿವಾಟು ನಡೆಸಿದ್ದಾರೆ. ಈ ಸಂಬಂಧ ಆಕೆಗೆ ಬ್ಯಾಂಕ್ ಗ್ರಾಹಕ ಸೇವಾ ಕೇಂದ್ರದಿಂದ ಕರೆ ಬಂದಿತ್ತು. ಇದು ತಾನೇ ನಡೆಸಿದ ವಹಿವಾಟು ಎಂದು ಅವರಿಗೆ ಹೇಳಬೇಕು. ಇಲ್ಲವಾದರೆ ಪ್ರಕರಣ ಅಂತ್ಯಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ವಂಚಕ ಹೇಳಿದ್ದ.

ಕ್ಯಾಮೆರಾ ಎದುರು ಬೆತ್ತಲೆ

ಇಷ್ಟೆಲ್ಲಾ ಹಣ ವರ್ಗಾವಣೆ ಆದ ಬಳಿಕ ಆತ 'ಮಾದಕವಸ್ತು ಪರೀಕ್ಷೆ' ನಡೆಸಬೇಕು. ಇದಕ್ಕಾಗಿ ಬಟ್ಟೆ ಕಳಚಿ ಎಂದು ಆದೇಶಿಸಿದ್ದ. ಕ್ಯಾಮೆರಾ ಎದುರು ಆಕೆ ಉಡುಪುಗಳನ್ನು ಕಳಚಿದ್ದರು. "ಹಾಗೆ ಮಾಡದೆ ಇದ್ದರೆ, ನನ್ನನ್ನು ಮತ್ತು ನನ್ನ ಕುಟುಂಬವನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲಾಗುವುದು. ನನ್ನನ್ನು ಹಾಗೂ ನನ್ನ ಕುಟುಂಬವನ್ನು ಸಾಯಿಸಲಾಗುವುದು ಎಂದು ಬೆದರಿಕೆ ಹಾಕಿ ನಿಂದಿಸಿದ್ದ" ಎಂದು ವಕೀಲೆ ದೂರಿನಲ್ಲಿ ಹೇಳಿದರು.

ಇದರ ಬಳಿಕ ಆಕೆಯ ಬೆತ್ತಲೆ ವಿಡಿಯೋಗಳನ್ನು ಇರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡತೊಡಗಿದ್ದ. ಅದೇ ದಿನ ಮಧ್ಯಾಹ್ನ 3 ಗಂಟೆ ಒಳಗೆ 10 ಲಕ್ಷ ರೂ ನೀಡದೆ ಹೋದರೆ ಡಾರ್ಕ್ ವೆಬ್‌ ಹಾಗೂ ಹಲವಾರು ಜನರಿಗೆ ವಿಡಿಯೋಗಳನ್ನು ಮಾರಾಟ ಮಾಡುವುದಾಗಿ ಬೆದರಿಸಿದ್ದ. ಇದಾದ ಬಳಿಕ ವಂಚನೆ ಎಂದು ತಿಳಿದು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com