ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು: ಪರಿಸರ ಸಂರಕ್ಷಣೆ ಕುರಿತು ಬೋಧನೆ!

ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಮುರ್ಮು ಅವರು, ಹವಾಮಾನ ಬದಲಾವಣೆ, ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆಯ ಕುರಿತು ಬೋಧನೆ ಮಾಡಿದರು. ಅಲ್ಲದೆ, ಮರ ನೆಡುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು
ರಾಷ್ಟ್ರಪತಿ ದ್ರೌಪದಿ ಮುರ್ಮು
Updated on

ನವದೆಹಲಿ: ದೆಹಲಿಯ ಡಾ ರಾಜೇಂದ್ರ ಪ್ರಸಾದ್ ಕೇಂದ್ರೀಯ ವಿದ್ಯಾಲಯಕ್ಕೆ ಗುರುವಾರ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಜಾಗತಿಕ ತಾಪಮಾನ ಏರಿಕೆ ಹಾಗೂ ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದರು.

ರಾಷ್ಟ್ರಪತಿಗಳಾಗಿ 2 ವರ್ಷಗಳ ಅಧಿಕಾರಾವಧಿ ಪೂರೈಸಿದ ಹಿನ್ನೆಲೆಯಲ್ಲಿ ದ್ರೌಪದಿ ಮುರ್ಮು ಅವರು, ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದರು.

ಈ ವೇಳೆ ಶಾಲೆಯ 9 ತರಗತಿಯ ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ಮುರ್ಮು ಅವರು, ಹವಾಮಾನ ಬದಲಾವಣೆ, ನೀರಿನ ಸಂರಕ್ಷಣೆ, ಪರಿಸರ ಸಂರಕ್ಷಣೆಯ ಕುರಿತು ಬೋಧನೆ ಮಾಡಿದರು. ಅಲ್ಲದೆ, ಮರ-ಗಿಡ ನೆಡುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಮರಗಳ ನೆಡಬೇಕು. ನೀರು ವ್ಯರ್ಥ ಮಾಡಬಾರದು. ಮಳೆನೀರು ಕೊಯ್ಲು ಮೂಲಕ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಇದಲ್ಲದೆ, ವಾಯು ಮಾಲಿನ್ಯ ಹಾಗೂ ಮಾಲಿನ್ಯ ಕಡಿಮೆ ಮಾಡುವ ಮಾರ್ಗಗಳ ಕುರಿತಂತೆ ಹಾಗೂ ಪ್ರಧಾನಿ ಮೋದಿ ಅವರು ಪ್ರಾರಂಭಿಸಿದ 'ಏಕ್ ಪೆಡ್ ಮಾ ಕೆ ನಾಮ್' ಉಪಕ್ರಮದ ಬಗ್ಗೆ ಮಾತನಾಡಿದರು. ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ಜನ್ಮದಿನದಂದು ಮರವನ್ನು ನೆಡುವಂತೆಯೂ ಹೇಳಿದರು.

ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವ ವೇಳೆ ಮಕ್ಕಳೊಂದಿಗೆ ಮಕ್ಕಳಾದ ರಾಷ್ಟ್ರಪತಿಗಳು, ವಿದ್ಯಾರ್ಥಿಗಳ ಆಸೆ, ಆಕಾಂಕ್ಷೆ ಹಾಗೂ ಅವರು ಇಷ್ಟಪಡುವ ವಿಷಯಗಳನ್ನು ಕೇಳಿದರು. ಈ ವೇಳೆ ಕೆಲ ವಿದ್ಯಾರ್ಥಿಗಳು ವಿಜ್ಞಾನಿ, ವೈದ್ಯರಾಗುವ ಇಚ್ಛೆಯನ್ನು ವ್ಯಕ್ತಪಡಿಸಿದರು.

ನಿಮ್ಮೊಂದಿಗಿದ್ದ ಸಮಯ ಸಾಕಷ್ಟು ಸಂತಸ ತಂದಿದೆ. ನಿಮ್ಮೆಲ್ಲರಿಂದ ಸಾಕಷ್ಟು ಕಲಿಯುವ ಅವಕಾಶ ಸಿಕ್ಕಿತು. ನೀವು 9 ನೇ ತರಗತಿಯಲ್ಲಿ ಓದುತ್ತಿದ್ದು, ಜಾಗತಿಕ ತಾಪಮಾನದ ಪ್ರಭಾವದ ಬಗ್ಗೆ ಚೆನ್ನಾಗಿ ತಿಳಿದಿರುತ್ತೀರಿ. ನೀವು ದೊಡ್ಡವರಾದ ನಂತರ ಜಾಗತಿಕ ತಾಪಮಾನ ಕಡಿಮೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ದ್ರೌಪದಿ ಮುರ್ಮು ಅವರು 1958 ಜೂನ್ 20 ರಂದು ಒಡಿಶಾ ರಾಜ್ಯದ ಮಯೂರ್ ಭಂಜ್ ಜಿಲ್ಲೆಯ ಬೈದಪೋಸಿ ಗ್ರಾಮದ ಸಂತಾಲಿ ಎಂಬ ಬುಡಕಟ್ಟು ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಮತ್ತು ಅಜ್ಜ ಪಂಚಾಯಾತ್ ರಾಜ್‌ ಯೋಜನೆಯಡಿಯಲ್ಲಿ ಗ್ರಾಮದ ಮುಖ್ಯಸ್ಥರಾಗಿದ್ದರು. ದ್ರೌಪದಿ ಮುರ್ಮು ವಿದ್ಯಾಭ್ಯಾಸ ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ದ್ರೌಪದಿ ಮುರ್ಮು ಅವರು ಬಿಎ ಪದವಿ ಪಡೆದಿದ್ದಾರೆ.

ದ್ರೌಪದಿ ಮುರ್ಮು ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಶಿಕ್ಷಕಿಯಾಗಿ ಸೇವೆಸಲ್ಲಿಸಿದ್ದರು. ಒಡಿಶಾದ ರಾಯರಂಗಪುರದಿಂದ 2000 ಮತ್ತು 2009 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರಪತಿ ಭವನವನ್ನು ತೊರೆಯಲು ನಿರ್ಧರಿಸಿದಾಗ ದ್ರೌಪದಿ ಮುರ್ಮು ಅವರನ್ನು ಮೊದಲ ಸ್ಪರ್ಧಿಯಾಗಿ ಪರಿಗಣಿಸಲಾಗಿತ್ತು. 2000 ರಲ್ಲಿ ಶಾಸಕಿಯಾಗಿ ಆಯ್ಕೆಯಾದ ಸಮಯದಲ್ಲಿ ಬಿಜೆಪಿ-ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ವಾಣಿಜ್ಯ, ಸಾರಿಗೆ, ಮೀನುಗಾರಿಕೆ, ಪಶುಸಂಗೋಪನೆ ಖಾತೆಗಳನ್ನು ಹೊಂದಿದ್ದರು. 2015 ದ್ರೌಪದಿ ಮುರ್ಮು ಅವರು ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com