
ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆಯಿಂದ ಅರ್ಧಕ್ಕೆ ಎದ್ದುಬಂದಿದ್ದಾರೆ. ಸಭೆಯಲ್ಲಿ ಮೈಕ್ ಆಫ್ ಮಾಡುವ ಮೂಲಕ ಮಾತನಾಡದಂತೆ ತಡೆಹಿಡಿಯಲಾಯಿತು ಎಂದು ಆರೋಪಿಸಿದ್ದಾರೆ.
2024-25ರ ಕೇಂದ್ರ ಬಜೆಟ್ ನಲ್ಲಿ ಎನ್ ಡಿಎಯೇತರ ಆಡಳಿತವಿರುವ ರಾಜ್ಯ ಸರ್ಕಾರಗಳಿಗೆ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಹಲವು ಪ್ರತಿಪಕ್ಷಗಳ ಮುಖ್ಯಮಂತ್ರಿಗಳ ಸಭೆಗೆ ಹಾಜರಾಗದಿದ್ದರೂ ತೃಣಮೂಲ ಕಾಂಗ್ರೆಸ್ ವರಿಷ್ಠೆಯಾಗಿರುವ ಸಿಎಂ ಮಮತಾ ಬ್ಯಾನರ್ಜಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಿಂದ ಹೊರಗೆ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ನಾನು ಮಾತನಾಡುವಾಗ ಮೈಕ್ ಆಫ್ ಮಾಡಲಾಗಿತ್ತು ಎಂದು ಆರೋಪಿಸಿದರು. 2024-25ನೇ ಸಾಲಿನ ಕೇಂದ್ರ ಬಜೆಟ್ ಪಕ್ಷಪಾತವಾಗಿದೆ ಎಂದು ಹೇಳುವ ಮೂಲಕ ವಾಗ್ದಾಳಿ ನಡೆಸಿದರು.
"ನಾನು ಸಭೆ ಬಹಿಷ್ಕರಿಸಿ ಹೊರಬಂದಿದ್ದೇನೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮಾತನಾಡಲು 20 ನಿಮಿಷ ನೀಡಲಾಯಿತು. ಅಸ್ಸಾಂ, ಗೋವಾ, ಛತ್ತೀಸ್‌ಗಢ ಮುಖ್ಯಮಂತ್ರಿಗಳು 10–12 ನಿಮಿಷಗಳ ಕಾಲ ಮಾತನಾಡಿದರು. ಕೇವಲ ಐದು ನಿಮಿಷಗಳ ನಂತರ ನನ್ನನ್ನು ಮಾತನಾಡದಂತೆ ತಡೆಯಲಾಯಿತು. ಇದು ನ್ಯಾಯಯುತವಾದದ್ದಲ್ಲ. ಪ್ರತಿಪಕ್ಷಗಳ ಕಡೆಯಿಂದ ನಾನು ಮಾತ್ರ ಹಾಜರಾಗಿದ್ದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬ ಕಾರಣಕ್ಕಾಗಿ ಸಭೆಯಲ್ಲಿ ಭಾಗವಹಿಸಿದ್ದೆ. ಆದರೆ, ನಾನು ಮಾತನಾಡದಂತೆ ತಡೆಹಿಡಿಯಲಾಯಿತು ಎಂದು ಹೇಳಿದರು.
ನಾನು ಮಾತನಾಡುವುದನ್ನು ತಡೆಯುವ ಕ್ರಮ ಬಂಗಾಳ ಮತ್ತು ಎಲ್ಲಾ ಪ್ರಾದೇಶಿಕ ಪಕ್ಷಗಳಿಗೆ ಮಾಡಿದ ಅವಮಾನವಾಗಿದೆ. ನಾನು ಮಾತನಾಡುವಾಗ ಮೈಕ್ ಆಫ್ ಮಾಡಿ ನನ್ನನ್ನೇಕೆ ತಡೆದಿರಿ?ಯಾಕೆ ತಾರತಮ್ಯ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ ಮಮತಾ, ನಾನು ಸಭೆಗೆ ಹಾಜರಾಗಿದ್ದಕ್ಕೆ ನೀವು ಸಂತೋಷವಾಗಿರಬೇಕಿತ್ತು. ಬದಲಾಗಿ ನಿಮ್ಮ ಪಕ್ಷಕ್ಕೆ ಮತ್ತು ನಿಮ್ಮ ಸರಕಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದೀರಿ. ವಿಪಕ್ಷಗಳಿಂದ ನಾನು ಮಾತ್ರ ಪಾಲ್ಗೊಂಡಿದ್ದೆ.ನಾನು ಮಾತನಾಡದಂತೆ ತಡೆಯುವ ಮೂಲಕ ವಿಪಕ್ಷಗಳು ಹಾಗೂ ಬಂಗಾಳಕ್ಕೆ ಅವಮಾನ ಮಾಡಿದ್ದೀರಿ ಎಂದು ಕೇಂದ್ರ ಸರ್ಕಾರದ ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ನೀತಿ ಆಯೋಗದ 9ನೇ ಆಡಳಿತ ಮಂಡಳಿ ಸಭೆ ಆರಂಭವಾಯಿತು. ಸಭೆಯು 2047ರೊಳಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಕಡೆಗೆ ಒತ್ತು ನೀಡಿದೆ. ಗ್ರಾಮೀಣ ಮತ್ತು ನಗರ ಪ್ರದೇಶದ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯವನ್ನು ಉತ್ತೇಜಿಸುವ ಗುರಿ ಹೊಂದಿದೆ. ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಆಮ್ ಆದ್ಮಿ ಪಕ್ಷದ ನೇತೃತ್ವದ ಪಂಜಾಬ್ ಮತ್ತು ದೆಹಲಿ ಸರ್ಕಾರಗಳೊಂದಿಗೆ ಕಾಂಗ್ರೆಸ್ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯನ್ನು ಬಹಿಷ್ಕರಿಸಿದ್ದಾರೆ.
ಈ ಮಧ್ಯೆ ಎನ್‌ಡಿಎ ಆಡಳಿತದ ಕೇಂದ್ರ ಸರ್ಕಾರದ ಮೈತ್ರಿಕೂಟದ ಪಾಲುದಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಸಭೆಯಿಂದ ಹೊರಗುಳಿದರು. ಅವರ ಸ್ಥಾನದಲ್ಲಿ, ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಸಭೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದರು. ನಿರ್ಣಾಯಕ ಸಭೆಗೆ ಕುಮಾರ್ ಗೈರುಹಾಜರಾಗಲು ಕಾರಣ ತಕ್ಷಣವೇ ತಿಳಿದುಬಂದಿಲ್ಲ.
Advertisement