Wayanad landslides: ಕರ್ನಾಟಕ ಮೂಲದ ಇಬ್ಬರ ಸಾವು, ಸಾವಿನ ಸಂಖ್ಯೆ 123ಕ್ಕೆ ಏರಿಕೆ; ಕೊಚ್ಚಿ ಹೋದ ಪಟ್ಟಣ!
ತಿರುವನಂತಪುರ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂ ಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 123ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಕರ್ನಾಟಕ ಮೂಲದ ಇಬ್ಬರು ಕೂಡ ಸೇರಿದ್ದಾರೆ.
ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಒಂದಿಡೀ ಪಟ್ಟಣವೇ ಭೂ ಕುಸಿತದಲ್ಲಿ ಕೊಚ್ಚಿ ಹೋಗಿದೆ. ವಿನಾಶಕಾರಿ ದುರಂತದಲ್ಲಿ ಈ ವರೆಗೂ ಕನಿಷ್ಟ 123 ಮಂದಿ ಸಾವಿಗೀಡಾಗಿದ್ದು, ಈ ಪೈಕಿ ಕರ್ನಾಟಕದ ಚಾಮರಾಜನಗರದ ಇಬ್ಬರು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಚಾಮರಾಜನಗರ ಜಿಲ್ಲೆಯ ಪುಟ್ಟ ಸಿದ್ದಿ(62) ಹಾಗೂ ರಾಣಿ ಎಂಬುವರ ತಾಯಿ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅವರು ವಯನಾಡಿನ ಮೆಪ್ಪಾಡಿಯಲ್ಲಿ ವಾಸವಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಚಾಮರಾಜನಗರದ ಇಬ್ಬರ ನಾಪತ್ತೆ
ಇನ್ನು ಚಾಮರಾಜನಗರ ತಾಲೂಕು ಇರಸವಾಡಿ ಮೂಲದ ರಾಜನ್ ಹಾಗೂ ರಜನಿ ನಾಪತ್ತೆಯಾಗಿದ್ದಾರೆ. ಇವರು ಕಳೆದ ಮೂವತ್ತು ವರ್ಷಗಳಿಂದ ಕೇರಳದ ಚೂರಲ್ಲಾದಲ್ಲಿ ವಾಸವಿದ್ದರು. ಇದೀಗ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿದ್ದು, ರಾಜನ್, ರಜನಿಗಾಗಿ ಶೋಧಕಾರ್ಯ ಮುಂದುವರಿದಿದೆ ಎಂದು ಚಾಮರಾಜನಗರ ಜಿಲ್ಲಾಡಳಿತ ಮಾಹಿತಿ ನೀಡಿದೆ. ಮಾತ್ರವಲ್ಲದೇ ಮುಂಡಕೈನ ಟೀ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದ ಚಾಮರಾಜನಗರದ ಗುಂಡ್ಲುಪೇಟೆಯ ಝಾನ್ಸಿರಾಣಿ, ಎರಡೂವರೆ ವರ್ಷದ ಪುತ್ರ ನಿಹಾಲ್ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸಾವಿನ ಸಂಖ್ಯೆ 123ಕ್ಕೆ ಏರಿಕೆ
ಕೇರಳದ ವಯನಾಡು ಜಿಲ್ಲೆಯ ಮೆಪ್ಪಾಡಿ, ಮುಂಡಕೈ, ಚೂರಲ್ಮಲ ಗ್ರಾಮದಲ್ಲಿ ಸಂಭವಿಸಿದ ಗುಡ್ಡ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 123ಕ್ಕೆ ಏರಿಕೆಯಾಗಿದೆ ಭೂಕುಸಿತ ಸ್ಥಳದಲ್ಲಿ ಸುಮಾರು 98ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇನ್ನು 128 ಜನರಿಗೆ ಗಾಯಗೊಂಡಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕೊಚ್ಚಿ ಹೋದ ಮುಂಡಕ್ಕೈ ಪಟ್ಟಣ
ಗುಡ್ಡ ಕುಸಿತ ಮತ್ತು ಪ್ರವಾಹದಿಂದಾಗಿ ಕೇರಳದ ಒಂದಿಡೀ ಪಟ್ಟಣ ಕೊಚ್ಚಿಕೊಂಡು ಹೋಗಿದೆ. ವರದಿಗಳ ಪ್ರಕಾರ, ಮುಂಡಕ್ಕೈ ಪಟ್ಟಣವು ಭೂಕುಸಿತದಿಂದ ಸಂಪೂರ್ಣವಾಗಿ ಕೊಚ್ಚಿಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಡಕ್ಕೈ, ಚೂರಲ್ಮಾಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಭೂಕುಸಿತದಿಂದ ಭೀಕರ ಹಾನಿಗೊಳಗಾಗಿದ್ದು, ಮಳೆಯಿಂದಾಗಿ ವಯನಾಡಿನ ಜಲಮೂಲಗಳು ಉಕ್ಕಿ ಹರಿಯುತ್ತಿದ್ದು ಪರಿಣಾಮ ನದಿಗಳು ತಮ್ಮ ಮಾರ್ಗವನ್ನೇ ಬದಲಾಯಿಸಿವೆ. ಪರಿಣಾಮ ನದಿಗಳು ಜನವಸತಿ ಪ್ರದೇಶಗಳ ಮೂಲಕ ಹರಿಯುತ್ತಿವೆ.
ಮಲಪ್ಪುರಂನ ಚಾಲಿಯಾರ್ ನದಿಯಿಂದ ಹಲವಾರು ಕಿಲೋಮೀಟರ್ ದೂರದಲ್ಲಿ ಹರಿಯುವ ನೀರಿನಿಂದ ಕೊಚ್ಚಿಹೋದ ಕನಿಷ್ಠ 17 ಮೃತದೇಹಗಳು ಪತ್ತೆಯಾಗಿವೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಕಾರ, 34 ಶವಗಳನ್ನು ಗುರುತಿಸಲಾಗಿದೆ ಮತ್ತು 18 ಶವಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಗುರುತಿಸಲಾಗದ ದೇಹಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದೆ. ಇದುವರೆಗೆ ಸುಮಾರು 128 ಜನರನ್ನು ರಕ್ಷಿಸಲಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನಿರಾಶ್ರಿತ ಶಿಬಿರಗಳ ಆರಂಭ
ಅಂತೆಯೇ ಜಿಲ್ಲೆಯಲ್ಲಿ 45 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, 3069 ಜನರನ್ನು ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯಾದ್ಯಂತ 118 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 5531 ಜನರಿದ್ದಾರೆ. ದುರಂತದ ಹಿನ್ನೆಲೆಯಲ್ಲಿ ಜುಲೈ 30 ಮತ್ತು 31 ರಂದು ಎರಡು ದಿನಗಳ ಅಧಿಕೃತ ಶೋಕಾಚರಣೆ ಘೋಷಿಸಿದ್ದು, ಈ ದಿನಗಳಲ್ಲಿ ಯಾವುದೇ ಅಧಿಕೃತ ಕಾರ್ಯಕ್ರಮಗಳು ಮತ್ತು ಆಚರಣೆಗಳು ಇರುವುದಿಲ್ಲ ಎಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ.