
ತಿರುವನಂತಪುರ: ಕೇರಳದಲ್ಲಿ ಸಂಭವಿಸಿದ ಭೀಕರ ಭೂ ಕುಸಿತ ಸಂಭವಿಸುವ 5 ಗಂಟೆ ಮೊದಲೇ ವಯನಾಡಿನಲ್ಲಿ ಸ್ಥಳೀಯ ಸುದ್ದಿವಾಹಿನಿ ವರದಿಗಾರ ಸಂಭಾವ್ಯ ದುರಂತದ ಕುರಿತು 5 ಗಂಟೆ ಮೊದಲೇ ವರದಿ ಮಾಡಿದ್ದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಹೌದು.. 190ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಕೇರಳದ ವಯನಾಡು ಭೂಕುಸಿತದ ಬಗ್ಗೆ ಸ್ಥಳೀಯ ಪತ್ರಕರ್ತ ಮಾಡಿದ್ದ ವರದಿಯೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ದುರಂತ ಸಂಭವಿಸುವ 5 ಗಂಟೆ ಮೊದಲು ಈ ವರದಿಗಾರ ಸಂಭಾವ್ಯ ದುರಂತದ ಬಗ್ಗೆ ಎಚ್ಚರಿಸಿದ್ದ ಎನ್ನಲಾಗಿದೆ.
ಸ್ಥಳೀಯ ಸುದ್ದಿವಾಹಿನಿಯೊಂದರ ವರದಿಗಾರ ವಯನಾಡಿನ ನದಿಯ ಬಳಿ ನಿಂತು ನದಿ ನೀರಿನಲ್ಲಿ ಮಣ್ಣು ಮಿಶ್ರಣವಾಗಿ ಹರಿಯುತ್ತಿದೆ. ಅಲ್ಲದೆ ನದಿಯಲ್ಲಿ ದೊಡ್ಡ ದೊಡ್ಡ ಬಂಡೆಕಲ್ಲುಗಳು ಮತ್ತು ಮರದ ತುಂಡುಗಳು ಹರಿಯುತ್ತಿದ್ದು, ಇದು ಗುಡ್ಡದಲ್ಲಿ ಭೂಕುಸಿತವಾಗಿರುವ ಕುರಿತು ಮುನ್ಸೂಚನೆಯೇ? ಎಂದು ವರದಿ ಮಾಡಿದ್ದ ವಿಡಿಯೋ ವೈರಲ್ ಆಗುತ್ತಿದೆ.
ಈ ವಿಡಿಯೋ ಸುದ್ದಿವಾಹಿನಿಯಲ್ಲಿ ಪ್ರಸಾರವಾದ 5 ಗಂಟೆಗಳಲ್ಲಿ ಭೂಕುಸಿತ ಸಂಭವಿಸಿದೆ ಎಂದು sonyjamesv ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ವೈರಲ್ ಆಗಿದ್ದು ಇದನ್ನು ಸುಮಾರು 30 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.
ಇನ್ನು ಕೇರಳದ ವಯನಾಡಿನಲ್ಲಿ ಸಂಭವಿಸಿರುವ ವಿನಾಶಕಾರಿ ಭೂ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಬುಧವಾರ 190ಕ್ಕೆ ಏರಿಕೆಯಾಗಿದೆ. 225 ಜನರು ನಾಪತ್ತೆ ಕುರಿತು ವರದಿಯಾಗಿದೆ. ಗಾಯಾಳುಗಳು ಮತ್ತು ನಾಪತ್ತೆಯಾದವರಿಗಾಗಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸೇನಾ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಇದುವರೆಗೆ ಸುಮಾರು 89 ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಸುಮಾರು 1,000 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆ ಹೇಳಿದೆ. ಸಂತ್ರಸ್ತರಿಗೆ ನಿರ್ಣಾಯಕ ನೆರವು ನೀಡಲು ಹಲವಾರು ರಕ್ಷಣಾ ತಂಡಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಸೇನೆ, ನೌಕಾಪಡೆ ಮತ್ತು ಎನ್‌ಡಿಆರ್‌ಎಫ್ ಸಿಬ್ಬಂದಿ ಭೂಕುಸಿತದಿಂದ ಬದುಕುಳಿದವರಿಗಾಗಿ ಕುಸಿದ ಮೇಲ್ಛಾವಣಿ ಮತ್ತು ಅವಶೇಷಗಳಡಿಯಲ್ಲಿ ಹುಡುಕುತ್ತಿದ್ದಾರೆ.
ಮಧ್ಯರಾತ್ರಿ ಸಂಭವಿಸಿದ ದುರಂತ
ಬಹುತೇಕ ಎಲ್ಲಾರು ನಿದ್ರಿಸುತ್ತಿರುವಾಗ ಮಧ್ಯರಾತ್ರಿ 1:30 ರಿಂದ 4 ಗಂಟೆಯ ನಡುವೆ ಭೂಕುಸಿತ ಸಂಭವಿಸಿದ್ದು, ಬೃಹತ್ ಬಂಡೆಗಳು ಮತ್ತು ಬೇರುಸಹಿತ ಮರಗಳು ಮುಂಡಕ್ಕೈನಿಂದ ಚೂರಲ್ಮಲಾಗೆ ನುಗ್ಗಿ ತೀವ್ರ ಹಾನಿಯನ್ನುಂಟುಮಾಡಿವೆ. ಬೆಟ್ಟದ ತುದಿಯಿಂದ ಭಾರೀ ನೀರು ಬಂದ್ದರಿಂದ ಸಣ್ಣ ಇರುವಝಿಂಜಿ ನದಿ ಪ್ರವಾಹದಲ್ಲಿ ಉಕ್ಕಿ ಹರಿದಿದೆ. ಹಲವಾರು ಮನೆಗಳು ಧ್ವಂಸಗೊಂಡಿವೆ. ಒಂದು ದೇವಾಲಯ ಮತ್ತು ಮಸೀದಿ ಮುಳುಗಡೆಯಾಗಿದೆ ಮತ್ತು ಶಾಲಾ ಕಟ್ಟಡವು ತೀವ್ರವಾಗಿ ಹಾನಿಗೊಳಗಾಗಿದೆ.
Advertisement