
ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ರೈಲು ಅಪಘಾತಗಳು ಮತ್ತು ರೈಲ್ವೇ ಸೇವೆ, ಮೂಲಸೌಕರ್ಯಗಳ ಸ್ಥಿತಿಯ ಬಗ್ಗೆ ಇಂದು ಲೋಕಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.
ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಸಂಸದರು ಬುಧವಾರ ಲೋಕಸಭೆಯಲ್ಲಿ ದೇಶದಲ್ಲಿ ಹೆಚ್ಚುತ್ತಿರುವ ರೈಲು ಅಪಘಾತಗಳ ಕುರಿತು ಕಳವಳ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಕೇಂದ್ರ ಬಜೆಟ್ ನಲ್ಲಿ ರೈಲ್ವೇ ಮೂಲಭೂಕ ಸೌಕರ್ಯ ಮತ್ತು ರೈಲು ಸುರಕ್ಷತೆಗಾಗಿ ಬಜೆಟ್ ನಲ್ಲಾದ ಪ್ರಸ್ತಾಪ ಮತ್ತು ಅನುದಾನಗಳ ಕುರಿತು ಪ್ರಶ್ನಿಸಿದರು.
ಟೋಂಕ್-ಸವಾಯಿ ಮಾಧೋಪುರದ ಕಾಂಗ್ರೆಸ್ ಸಂಸದ ಹರೀಶ್ ಮೀನಾ ಅವರು ರೈಲ್ವೆ ಸಚಿವಾಲಯದ ಅನುದಾನದ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ರೈಲ್ವೆ ಸುರಕ್ಷತೆ ಮತ್ತು ಪ್ರಯಾಣಿಕರ ಕಲ್ಯಾಣದ ಬಗ್ಗೆ ಗಮನ ಹರಿಸದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ''ದೇಶದಲ್ಲಿ ಹೆಚ್ಚುತ್ತಿರುವ ರೈಲು ಅಪಘಾತಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ.
ಇದು ರಾಜಕೀಯ ಬಜೆಟ್, ನನ್ನ ಕ್ಷೇತ್ರಕ್ಕೆ ಯಾವುದೇ ಹೊಸ ರೈಲುಗಳು ಅಥವಾ ಇತರೆ ಪರಿಹಾರ ಸಿಕ್ಕಿಲ್ಲ. ಈ ಹಿಂದೆ ಎರಡು ರೈಲುಗಳನ್ನು ಸ್ಥಗಿತಗೊಳಿಸಲಾಗಿದ್ದು, ಇನ್ನೂ ಅವುಗಳನ್ನು ಪುನರಾರಂಭಿಸಿಲ್ಲ. ಈ ರೈಲುಗಳು ಕಾರ್ಯನಿರ್ವಹಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.
ಇದೇ ವೇಳೆ ಹೆಚ್ಚುತ್ತಿರುವ ರೈಲು ಅಪಘಾತಗಳ ಕುರಿತು ಮಾತನಾಡಿದ ಅವರು, ಈ ಹಿಂದೆ ಇಂತಹ ದುರ್ಘಟನೆಗಳಾದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರಂತಹ ಮಹಾನ್ ನಾಯಕರು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದರು. ಅದೇ ಹಾದಿಯಲ್ಲಿ ವೈಷ್ಣವ್ ಇದ್ದಾರೆ. ಈ ಅಪಘಾತಗಳಿಗೆ ಯಾರು ಹೊಣೆ? ರಾಜೀವ್ ಪ್ರತಾಪ್ ರೂಡಿಯೇ? ಎಂದು ಪ್ರಶ್ನಿಸಿದರು.
ಇದಕ್ಕೆ ಬಿಹಾರದ ಸರನ್ ಕ್ಷೇತ್ರದನ ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ತಿರುಗೇಟು ನೀಡಿದ್ದು, "ನೀವು ರಾಜಸ್ಥಾನದಲ್ಲಿ ಡಿಜಿಪಿ ಆಗಿದ್ದಾಗ ಅಲ್ಲಿ ಸಂಭವಿಸಿದ ಎಲ್ಲ ಅಪಘಾತಗಳಿಗೆ ನೀವೇ ಹೊಣೆಯೇ" ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
NDA ಅವಧಿಯಲ್ಲಿ ರೈಲ್ವೇ ಮೂಲಭೂತ ಸೌಕರ್ಯ ಉತ್ತುಂಗದಲ್ಲಿದೆ: ಬಿಜೆಪಿ ಸಂಸದರು
ಅತ್ತ ಸಂಸದ ರಾಜೀವ್ ಪ್ರತಾಪ್ ರೂಡಿ ಉತ್ತರದ ಬೆನ್ನಲ್ಲೇ ಎದ್ದು ನಿಂತ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ಸಂಸದರು ದೇಶದಲ್ಲಿ ರೈಲ್ವೆ ಮೂಲಸೌಕರ್ಯಗಳು ಈ ಹಿಂದೆಂದಿಗಿಂತಲೂ ಉನ್ನತ ಮಟ್ಟದಲ್ಲಿದೆ ಎಂದರು. ಝಂಜರ್‌ಪುರ ಕ್ಷೇತ್ರದ ಜೆಡಿಯು ಪಕ್ಷದ ಸಂಸದ ರಾಮಪ್ರೀತ್ ಮಂಡಲ್ ಅವರು 'ಬಿಹಾರದಲ್ಲಿ ರೈಲ್ವೇ ಸೇವೆ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ, ಬಿಹಾರದಲ್ಲಿ ರೈಲು ಹಳಿಗಳು ಮೂರು ಪಟ್ಟು ವಿಸ್ತರಿಸಿವೆ ಮತ್ತು ರಾಜ್ಯದಾದ್ಯಂತ 490 ಸೇತುವೆಗಳನ್ನು ನಿರ್ಮಿಸಲಾಗಿದೆ" ಎಂದು ಹೇಳಿದರು.
ಭಾರತೀಯ ರೈಲ್ವೆಯ "ಸುವರ್ಣ ಯುಗ"
ಇದಕ್ಕೆ ಧನಿಗೂಡಿಸಿದ ಗರ್ವಾಲ್‌ನ ಬಿಜೆಪಿ ಸಂಸದ ಅನಿಲ್ ಬಲುನಿ ಕಳೆದ ದಶಕವನ್ನು ಭಾರತೀಯ ರೈಲ್ವೆಯ "ಸುವರ್ಣ ಯುಗ" ಎಂದು ಬಣ್ಣಿಸಿದರು. ಕಳೆದ 10 ವರ್ಷಗಳ ಅವಧಿಯು ರೈಲ್ವೇ ಸೇವೆಯು ಇತಿಹಾಸದಲ್ಲೇ ಅಭೂತಪೂರ್ವವಾಗಿದೆ. ರೈಲುಗಳ ಕನಸು ಕಾಣುತ್ತಿದ್ದ ಅನೇಕ ಪ್ರದೇಶಗಳು ಈಗ ರೈಲ್ವೆ ಸೇವೆ ಹೊಂದಿವೆ. ನಮ್ಮ ರೈಲುಗಳ ಸರಾಸರಿ ವೇಗವು ಈಗ 80 ಕಿಮೀ / ಗಂಟೆ ಆಗಿದೆ ಮತ್ತು ಕಳೆದ ವರ್ಷವೊಂದರಲ್ಲೇ 5000 ಕಿಮೀ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ. ಯುಪಿಎ ಆಡಳಿತಕ್ಕೆ ಹೋಲಿಸಿದರೆ ಹೆಚ್ಚಿದ ಬಜೆಟ್ ಹಂಚಿಕೆ ಮತ್ತು ವಂದೇ ಭಾರತ್ ಮತ್ತು ಜನಶತಾಬ್ದಿ ರೈಲುಗಳ ಪರಿಚಯಿಸಲಾಗಿದೆ ಎಂದರು.
ವಿಮಾನ ನಿಲ್ದಾಣಗಳಿಗೆ ಸಮಾನಲಾಗಿ ರೈಲು ನಿಲ್ದಾಣಗಳು ಮೇಲ್ದರ್ಜೆಗೆ
ಇನ್ನು ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಖಗಾರಿಯಾ ಸಂಸದ ರಾಜೇಶ್ ವರ್ಮಾ ಮಾತನಾಡಿ, ಹಿಂದೆಂದೂ ಆಗದ ರೀತಿಯಲ್ಲಿ ಇಂದು ದೇಶದಲ್ಲಿ ರೈಲ್ವೇ ಅಭಿವೃದ್ಧಿಯಾಗುತ್ತಿದೆ. ವಿಮಾನ ನಿಲ್ದಾಣಗಳಿಗೆ ಸಮಾನಲಾಗಿ ರೈಲು ನಿಲ್ದಾಣಗಳು ಮೇಲ್ದರ್ಜೆಗೇರುತ್ತಿವೆ. ಸರ್ಕಾರವು ರೈಲ್ವೆಗಾಗಿ ಅತಿದೊಡ್ಡ ಬಜೆಟ್ ಅನ್ನು ಒದಗಿಸಿದೆ. ನಾನು ವಿಶೇಷವಾಗಿ ನಮ್ಮ ರೈಲು ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ, ಇದು ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.
Advertisement