ನವದೆಹಲಿ: ಲೋಕಸಭಾ ಚುನಾವಣೆ 2024ರ ಫಲಿತಾಂಶ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ತೀವ್ರ ಕುತೂಹಲ ಕೆರಳಿಸಿರುವ ಈ ಬಾರಿಯ ಚುನಾವಣೆಯಲ್ಲಿ ಮತ್ತೆ ಪ್ರಧಾನಿ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆ ಎರಲಿದೆ ಎಂದು ಬಹುತೇಕ Exit Poll ಸರ್ವೆಗಳು ಭವಿಷ್ಯ ನುಡಿದಿವೆ.
ಹೌದು.. ಹಾಲಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಎಕ್ಸಿಟ್ ಪೋಲ್ ಸರ್ವೆಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿ ಕೂಟ ಸತತ ಮೂರನೇ ಅವಧಿಗೆ ಅಧಿಕಾರದ ಗದ್ದುಗೆ ಏರುವ ಕುರಿತು ಭವಿಷ್ಯ ನುಡಿದಿವೆ. 2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಸತತ ಮೂರು ಬಾರಿ ಆಯ್ಕೆಯಾದ ಏಕೈಕ ಪ್ರಧಾನಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ದಾಖಲೆಯನ್ನು ಅವರು ಸರಿಗಟ್ಟಲಿದ್ದಾರೆ.
ಪಂಡಿತ್ ಜವಾಹರ್ ಲಾಲ್ ನೆಹರು ಅವರು 1947 ರಿಂದ 1964 ರವರೆಗೆ ಸತತ 17 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಲೋಕಸಭೆಯ ವೆಬ್‌ಸೈಟ್‌ನ ಅಧಿಕೃತ ಮಾಹಿತಿ ಪ್ರಕಾರ ನೆಹರೂ ಅವರು ದೇಶದಲ್ಲಿ ಸುದೀರ್ಘ ಅವಧಿಗೆ ಪ್ರಧಾನಿಯಾಗಿದ್ದ ಏಕೈಕ ವ್ಯಕ್ತಿಯಾಗಿದ್ದಾರೆ.
''ಅಬ್ ಕಿ ಬಾರ್ 400 ಪಾರ್''; ನಿಜವಾಗುತ್ತಾ ಬಿಜೆಪಿ ಘೋಷಣೆ?
ಇನ್ನು ಈ ಬಾರಿ ಹೆಚ್ಚು ಸುದ್ದಿಗೆ ಗ್ರಾಸವಾಗಿದ್ದು, ಬಿಜೆಪಿಯ ಅಬ್ ಕಿ ಬಾರ್ 400 ಪಾರ್.. ಅಂದರೆ ಈ ಬಾರಿ ಬಿಜೆಪಿ ನೇತೃತ್ವದ NDA ಮೈತ್ರಿಕೂಟ 400ಕ್ಕೂ ಅಧಿಕ ಸ್ಥಾನ ಗಳಿಸಲಿದೆ ಎಂಬ ಘೋಷ ವಾಕ್ಯ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, 1951 ರ ಮೊದಲ ಚುನಾವಣೆಯ ನಂತರ ನೆಹರು ಅಧಿಕಾರಕ್ಕೆ ಮರಳಿದಾಗ 1957 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ 371 ಸ್ಥಾನಗಳನ್ನು ಗೆದ್ದಿತ್ತು.
ಇದು ಇದುವರೆಗಿನ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಒಂದು ರಾಜಕೀಯ ಪಕ್ಷವು ಗೆದ್ದಿರುವ ಅತಿ ಹೆಚ್ಚು ಲೋಕಸಭಾ ಸ್ಥಾನಗಳು (371) ಆಗಿದೆ. 2019ರ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷ 303 ಸ್ಥಾನಗಳನ್ನು ಗಳಿಸಿತ್ತು. ಇದು ದೇಶದ ಚುನಾವಣಾ ಇತಿಹಾಸದಲ್ಲೇ ಪಕ್ಷವೊಂದು ಗಳಿಸಿದ 2ನೇ ಗರಿಷ್ಠ ಸ್ಥಾನಗಳಾಗಿವೆ.
ಆದಾಗ್ಯೂ, 2024 ರ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‌ಗಳು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಒಟ್ಟಾರೆಯಾಗಿ ಸುಮಾರು 350-370 ಸ್ಥಾನಗಳ ಬರುವ ಕುರಿತು ಭವಿಷ್ಯ ನುಡಿದಿವೆ.
400ಕ್ಕೂ ಹೆಚ್ಚು ಸ್ಥಾನ ಗೆದ್ದರೆ ಸಂವಿಧಾನಕ್ಕೆ ಮಾರಕ: ವಿಪಕ್ಷಗಳು
ಇನ್ನು ಬಿಜೆಪಿ ''ಅಬ್ ಕಿ ಬಾರ್ 400 ಪಾರ್'' ಘೋಷಣೆಯನ್ನು ವಿರೋಧಿಸಿರುವ ವಿಪಕ್ಷಗಳು ಬಿಜೆಪಿ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ದೇಶದ ಸಂವಿಧಾನಕ್ಕೆ "ಬೆದರಿಕೆ"ಯಾಗಿದೆ ಎಂದು ಅಭಿಪ್ರಾಯಪಟ್ಟಿವೆ. ಎನ್ ಡಿಎ ಮೈತ್ರಿಕೂಟ 400 ಸ್ಥಾನಗಳೊಂದಿಗೆ ಅಧಿಕಾರಕ್ಕೇರಿದರೆ ಸಂವಿಧಾನವನ್ನೇ ಬದಲಿಸುವ ಅಪಾಯವಿದೆ ಎಂದು ಅನೇಕ ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ.
ಅದಾಗ್ಯೂ INDIA ಕೂಟದ ನಾಯಕರು ಎಕ್ಸಿಟ್ ಪೋಲ್ ಸರ್ವೇ ವರದಿಗಳನ್ನು ನಿರಾಕರಿಸಿದ್ದು, ತಮ್ಮ ಮೈತ್ರಿಕೂಟ 280ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿವೆ. 2024 ರ ಚುನಾವಣೆಯು 2004 ರ ಚುನಾವಣೆಯ ಪುನರಾವರ್ತನೆಯಾಗಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 145 ಸ್ಥಾನಗಳಲ್ಲಿ ಜಯಭೇರಿ ಭಾರಿಸಿ ತನ್ನ ಮೈತ್ರಿಕೂಟದ ಪಕ್ಷಗಳ ಬೆಂಬಲದೊಂದಿಗೆ ಕೇಂದ್ರದಲ್ಲಿ ಅಧಿಕಾರದ ಗುದ್ದುಗೆ ಏರಿತ್ತು. 2009ರ ಚುನಾವಣೆಯಲ್ಲಿ ಕಾಂಗ್ರೆಸ್ 206 ಸ್ಥಾನಗಳೊಂದಿಗೆ ಮತ್ತೆ ಕಾಂಗ್ರೆಸ್ ಅಧಿಕಾರದ ಗುದ್ದಿಗೆ ಏರಿತ್ತು. ಸತತ 2ನೇ ಬಾರಿಗೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು.
Advertisement