ಶ್ರೀನಗರ: ಟಾಟಾ ಪಂಚ್ ಕಾರೊಂದು ನಿಯಂತ್ರಣ ತಪ್ಪಿ ಕಡಿದಾದ ಕಣಿವೆಗೆ ಉರುಳಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿರುವ ನಾಟಕೀಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಜಮ್ಮು ಮತ್ತು ಕಾಶ್ಮೀರ ನೋಂದಣಿಯ ಟಾಟಾ ಪಂಚ್ ಕಾರು ಕಣಿವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಕಾರಿನವ ಮುಂಭಾಗ ರಸ್ತೆಯಿಂದ ಮುಂದಕ್ಕೆ ಬಂದಿದ್ದು, ಕಾರು ಕಣಿವೆಗೆ ಉರುಳುವ ಅಪಾಯಕ್ಕೆ ಸಿಲುಕಿತ್ತು. ಕೂಡಲೇ ಅಪಾಯ ಅರಿತ ಚಾಲಕ ಸ್ಥಳೀಯರನ್ನು ನೆರವಿಗೆ ಕೂಗಿದ್ದು, ಈ ವೇಳೆ ಇಳಿಜಾರಿಗೆ ಇಳಿದ ಇಬ್ಬರು ಸ್ಥಳೀಯರು ಕಾರನ್ನು ಹಿಂದಕ್ಕೆ ತಳ್ಳಲು ಯತ್ನಿಸಿದ್ದಾರೆ.
ಆದರೆ ಇಳಿಜಾರು ತೀರಾ ಕಡಿದಾದ್ದರಿಂದ ಕಾರು ನೋಡ ನೋಡುತ್ತಲೇ ಕಣಿವೆಯತ್ತ ಜಾರಿದೆ. ಈ ವೇಳೆ ಕಾರನ್ನು ತಡೆಯಲೆತ್ನಿಸಿದ ಇಬ್ಬರೂ ಪಕ್ಕಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದು, ಕಾರಿನಲ್ಲಿದ್ದ ಚಾಲಕ ಕೂಡ ಹೊರಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಹೊರಗೆ ಹಾರುವಾಗ ಆತನ ಕಾಲು ಕಾರಿ ಸಿಲುಕಿ ಕೊಂಚ ದೂರ ಎಳೆದುಕೊಂಡು ಹೋಗಿದೆ. ಇದರಿಂದ ಚಾಲಕನಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.
ಈ ವಿಡಿಯೋವನ್ನು ಪ್ರತೀಕ್ ಸಿಂಗ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ. ಅಲ್ಲದೆ ಪರ್ವತ ಪ್ರದೇಶಗಳಲ್ಲಿ ಚಲಿಸುವ ಕಾರು ಚಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಅತ್ಯಂತ ಜಾಗರೂಕವಾಗಿ ಕಾರು ಚಲಾಯಿಸುವಂತೆ ಎಚ್ಚರಿಕೆ ನೀಡುವಂತಿದೆ.
Advertisement