
ನವದೆಹಲಿ: ಲೋಕಸಭಾ ಚುನಾವಣೆ 2024 ರ ಫಲಿತಾಂಶ ಪ್ರಕಟಗೊಂಡಿದ್ದು ಎನ್ ಡಿಎ ಗೆ ಬಹುಮತ ದೊರೆತಿದೆ. ಹೊಸ ಸರ್ಕಾರ ರಚನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಈ ಹಿಂದಿನ ಸರ್ಕಾರದ ಕೊನೆಯ ಕ್ಯಾಬಿನೆಟ್ ಸಭೆಯನ್ನು ಇಂದು ನಡೆಸಲಿದ್ದಾರೆ.
ಬಿಜೆಪಿಗೆ 240 ಸ್ಥಾನಗಳು ದೊರೆತಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಅಗತ್ಯವಿರುವ ಸರಳ ಬಹುಮತ ದೊರೆತಿದೆ. ಕ್ಯಾಬಿನೆಟ್ ಸಭೆ ಬಳಿಕ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ಎನ್ ಡಿಎ ನಾಯಕರೊಂದಿಗೆ ಮೋದಿ ಸಭೆ
ಇದೇ ವೇಳೆ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಬೇಕಾದರೆ, ಎನ್ ಡಿಎ ಮಿತ್ರಪಕ್ಷಗಳ ಸಂಸದರ ಬೆಂಬಲ ಅಗತ್ಯವಾಗಿದ್ದು, ನಾಳೆ ಮೋದಿ ಎನ್ ಡಿಎ ಮಿತ್ರಪಕ್ಷಗಳ ಸಭೆಯನ್ನೂ ನಡೆಸಲಿದ್ದಾರೆ.
ಸರ್ಕಾರ ರಚನೆಯಲ್ಲಿ ಟಿಡಿಪಿ ಹಾಗೂ ಜೆಡಿಯು ನಿರ್ಣಾಯಕ ಪಾತ್ರ ವಹಿಸಲಿದ್ದು, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ನಿತೀಶ್ ಕುಮಾರ್ ನಾಳೆ ಮೋದಿ ಜೊತೆ ಸಭೆ ನಡೆಸಲು ನವದೆಹಲಿಗೆ ತೆರಳಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಮಿತ್ರ ಪಕ್ಷ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸಹ ನಾಳೆ ದೆಹಲಿಗೆ ತೆರಳುತ್ತಿದ್ದಾರೆ.
ಬಿಹಾರದಲ್ಲಿ 40 ಸ್ಥಾನಗಳ ಪೈಕಿ ನಿತೀಶ್ ಕುಮಾರ್ ಪ್ರತಿನಿಧಿಸುವ ಜೆಡಿಯು 12 ಸ್ಥಾನಗಳನ್ನು ಗೆದ್ದಿದ್ದರೆ, ಆಂಧ್ರಪ್ರದೇಶದಲ್ಲಿ ಟಿಡಿಪಿ 16 ಸ್ಥಾನಗಳಲ್ಲಿ ಗೆದ್ದಿದೆ.
Advertisement