
ಭುವನೇಶ್ವರ: ಒಡಿಶಾ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಬಿಜು ಜನತಾದಳ ಹಾಗೂ ಸಿಎಂ ನವೀನ್ ಪಟ್ನಾಯಕ್ ಭಾರಿ ಹಿನ್ನಡೆ ಅನುಭವಿಸಿದ್ದು, 66 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಒಡಿಶಾದ 147 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಈ ಪೈಕಿ 66 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, 40 ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಡಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, 4 ಕ್ಷೇತ್ರಗಳಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ.
ಪುರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯಂತ್ ಸಿಂಗ್ ಮುನ್ನಡೆ ಕಾಯ್ದುಕೊಂಡಿದ್ದು, ಜಾರ್ಸುಗುಡ ಕ್ಷೇತ್ರದಲ್ಲಿ ಬಿಜೆಪಿಯ ದಿಪಾಲಿ ದಾಸ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಭೋಗ್ರಾಯ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸತ್ಯಶಿವ್ ದಾಸ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಎಕ್ಸಿಟ್ ಪೋಲ್ ಸರ್ವೆ ಏನು ಹೇಳಿತ್ತು?
ಮೇ 13, ಮೇ 20, ಮೇ 25 ಹಾಗೂ ಜೂನ್ 1 ಸೇರಿದಂತೆ ನಾಲ್ಕು ಹಂತದಲ್ಲಿ ಒಡಿಶಾದಲ್ಲಿ ಚುನಾವಣೆ ನಡೆದಿತ್ತು. ಒಡಿಶಾ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಏಕಕಾಲದಲ್ಲಿ ಮುಕ್ತಯಗೊಂಡಿದ್ದು, ಏತನ್ಮಧ್ಯೆ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಈ ಬಾರಿ ಒಡಿಶಾದಲ್ಲಿ ನವೀನ್ ಪಟ್ನಾಯಕ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಸಮೀಕ್ಷೆಗಳು ಹೇಳಿವೆ.
ಇಂಡಿಯಾ ಟುಡೇ ಮತ್ತು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಪ್ರಕಾರ, ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 62ರಿಂದ 80 ಸ್ಥಾನ ಪಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ 50ರಿಂದ 60 ಸ್ಥಾನ ಪಡೆಯಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿತ್ತು.
Advertisement