
ಮುಂಬೈ: ಲೋಕಸಭೆ ಚುನಾವಣೆ ಫಲಿತಾಂಶ ಬಿಜೆಪಿಯನ್ನು ಸೋಲಿಸಬಹುದೆಂದು ತೋರಿಸಿದೆ ಎಂದು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬುಧವಾರ ಹೇಳಿದ್ದಾರೆ.
ಚುನಾವಣೆಯಲ್ಲಿ ಗೆದ್ದಿರುವ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬುಧವಾರ ತಮ್ಮ ನಿವಾಸದಲ್ಲಿ ಭೇಟಿಯಾದ ಬಳಿಕ ಮಾತನಾಡಿದ ಉದ್ಧವ್ ಠಾಕ್ರೆ, ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಮಿಥ್ಯೆಯನ್ನು ಹೋಗಲಾಡಿಸಿದ್ದು, ಬಿಜೆಪಿಯನ್ನು ಸೋಲಿಸಬಹುದು ಎಂಬುದನ್ನು ಚುನಾವಣೆ ತೋರಿಸಿದೆ ಎಂದರು.
ಚುನಾವಣೆಯಲ್ಲಿ ವಿಜೇತರಾದ ನಾಸಿಕ್ ಕ್ಷೇತ್ರದ ಶಿವಸೇನಾ ಯುಬಿಟಿ ಬಣದ ರಾಜಬಾಹು ಪ್ರಕಾಶ್ ವಾಜೆ, (ಮುಂಬೈ ಈಶಾನ್ಯ ಕ್ಷೇತ್ರದ ಸಂಜಯ್ ದಿನಾ ಪಾಟೀಲ್ ಅವರಿಂದು ಠಾಕ್ರೆ ಅವರನ್ನು ಭೇಟಿಯಾದರು. ನಿನ್ನೆ ಮುಂಬೈ ದಕ್ಷಿಣ ಸ್ಥಾನದ ಅರವಿಂದ್ ಸಾವಂತ್ ಮತ್ತು ಮುಂಬೈ ಸೌತ್ ಸೆಂಟ್ರಲ್ ಸ್ಥಾನದ ಅನಿಲ್ ದೇಸಾಯಿ ಅವರನ್ನು ಭೇಟಿಯಾದರು.
543 ಸದಸ್ಯ ಬಲದ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದುಕೊಂಡು ಬಹುಮತದ ಕೊರತೆ ಎದುರಿಸುತ್ತಿದೆ. ಮಿತ್ರಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ. ಲೋಕಸಭೆ ಚುನಾವಣೆಯಲ್ಲಿ ಶಿವಸೇನೆ (ಯುಬಿಟಿ) ಒಂಬತ್ತು ಸ್ಥಾನಗಳನ್ನು ಗೆದ್ದಿದೆ. ಮುಂಬೈನ ಹೊರಗಿನಿಂದ ಹೊಸದಾಗಿ ಆಯ್ಕೆಯಾದ ಎಲ್ಲಾ ಪಕ್ಷದ ನಾಯಕರು ಬುಧವಾರ ಠಾಕ್ರೆ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ.
Advertisement