
ನವದೆಹಲಿ: ಚೀನಿ ಪ್ರಜೆಗಳಿಗೆ ವೀಸಾ ಕೊಡಿಸಿದ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಅವರಿಗೆ ದೆಹಲಿ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ.
ಇ.ಡಿ ಮತ್ತು ಸಿಬಿಐ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಕಾರ್ತಿ ಚಿದಂಬರಂ ಅವರು ನ್ಯಾಯಾಲಯಕ್ಕೆ ಹಾಜರಾದ ನಂತರ ಅವರಿಗೆ ರಿಲೀಫ್ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು (ಚಾರ್ಜ್ ಶೀಟ್) ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯ ಆರೋಪಿ ವಿರುದ್ಧ ಸಮನ್ಸ್ ಜಾರಿ ಮಾಡಿತ್ತು.
ನ್ಯಾಯಾಧೀಶರು ಒಂದು ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ.
ಕಾರ್ತಿ ಚಿದಂಬರಂ ಅವರು ತಮ್ಮ ತಂದೆ ಪಿ ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದ ಅವಧಿಯಲ್ಲಿ (2011) 263 ಚೀನಿ ಪ್ರಜೆಗಳಿಗೆ ವೀಸಾ ಕೊಡಿಸಲು 50 ಲಕ್ಷ ರೂಪಾಯಿ ಲಂಚ ಪಡೆದಿದ್ದರು ಎಂಬ ಆರೋಪ ಸಂಬಂಧ ಕಾರ್ತಿ ಮತ್ತು ಇತರರ ವಿರುದ್ಧ ಇ.ಡಿ ಹಣ ಅಕ್ರಮ ವರ್ಗಾವಣೆ ಪ್ರಕರಣ (ಪಿಎಂಎಲ್ಎ) ದಾಖಲಿಸಿತ್ತು.
Advertisement