
ಕೋಟಾ (ರಾಜಸ್ಥಾನ): ನೀಟ್-ಯುಜಿ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ, 18 ವರ್ಷದ ವೈದ್ಯಕೀಯ ಆಕಾಂಕ್ಷಿಯೊಬ್ಬರು ಇಲ್ಲಿನ ಕಟ್ಟಡದ ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಬಹುಮಹಡಿ ಕಟ್ಟಡದ ಐದನೇ ಮಹಡಿಯಲ್ಲಿ ತನ್ನ ತಾಯಿ ಮತ್ತು ಸಹೋದರನೊಂದಿಗೆ ವಾಸಿಸುತ್ತಿದ್ದ ಬಗೀಶಾ ತಿವಾರಿ ಎಂಬುವವರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾದ ಗಂಟೆಯ ನಂತರ ಆಕೆ ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯವರಾದ ತಿವಾರಿ ಅವರು ಕೋಟಾದ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಯುಜಿ) ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
12ನೇ ತರಗತಿಯಲ್ಲಿ ಓದುತ್ತಿರುವ ಆಕೆಯ ಸಹೋದರ ಕೂಡ ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿದ್ದಾರೆ ಎಂದು ಜವಾಹರ್ ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಹರಿನಾರಾಯಣ ಶರ್ಮಾ ಗುರುವಾರ ಬೆಳಗ್ಗೆ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮಂಗಳವಾರ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿತ್ತು.
ಈ ವರ್ಷದ ಜನವರಿಯಿಂದ ಕೋಟಾದಲ್ಲಿ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕಿತ ಹತ್ತನೇ ಪ್ರಕರಣ ಇದಾಗಿದ್ದು, ಕಳೆದ ವರ್ಷ 26 ಶಂಕಿತ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಕಳೆದ ಕೆಲವು ವರ್ಷಗಳಲ್ಲಿ ಇದುವೇ ಅತಿ ಹೆಚ್ಚು.
ತಿವಾರಿ ಒಂಬತ್ತನೇ ಮಹಡಿಯ ಬಾಲ್ಕನಿಯಿಂದ ಜಿಗಿದಿದ್ದಾರೆ. ಮಹಿಳೆಯೊಬ್ಬರು ಇದನ್ನು ಕಂಡು ಆಕೆಯನ್ನು ತಡೆಯಲು ಯತ್ನಿಸಿದರಾದರೂ, ತಡೆಯಲು ವಿಫಲರಾದರು. ಕುಟುಂಬ ಸದಸ್ಯರು ಮತ್ತು ಇತರರು ತಕ್ಷಣ ಬಾಲಕಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ ಎಂದು ಸಿಐ ತಿಳಿಸಿದ್ದಾರೆ.
ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಹಾರಾವ್ ಭೀಮ್ ಸಿಂಗ್ (ಎಂಬಿಎಸ್) ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಆಕೆಯ ತಂದೆ ಆಗಮಿಸಿದ ನಂತರ ನಡೆಸಲಾಗುವುದು ಎಂದು ಅವರು ಹೇಳಿದರು.
Advertisement