
ಒಡಿಶಾ: ಒಡಿಶಾದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ ಪಕ್ಷದ ನಾಯಕ ತಮ್ಮ ಪಕ್ಷದ ಉತ್ತರಾಧಿಕಾರಿಯೆಂದೇ ಬಿಂಬಿತರಾಗಿರುವ ವಿಕೆ ಪಾಂಡಿಯನ್ ಬೆನ್ನಿಗೆ ನಿಂತಿದ್ದಾರೆ.
ಚುನಾವಣಾ ಸೋಲಿಗೆ ಪಾಂಡಿಯನ್ ಕಾರಣ ಎಂಬ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ನಿರ್ಗಮಿತ ಸಿಎಂ ನವೀನ್ ಪಟ್ನಾಯಕ್, ಚುನಾವಣಾ ಸೋಲಿಗೆ ಪಾಂಡಿಯನ್ ಅವರನ್ನು ದೂಷಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಆಡಳಿತದಲ್ಲಿ ಹಾಗೂ ಬಿಜೆಡಿಯಲ್ಲಿ ಪಾಂಡಿಯನ್ ನಿರ್ವಹಿಸಿರುವ ಕೆಲಸಗಳ ಬಗ್ಗೆ ನವೀನ್ ಪಟ್ನಾಯಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಂಡಿಯನ್ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ದುರದೃಷ್ಟಕರ ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.
ಈ ಹಿಂದೆ ಬಿಜೆಡಿ ಮತ್ತು ಸರ್ಕಾರಿ ವ್ಯವಹಾರಗಳಲ್ಲಿ ನಿರಂತರವಾಗಿ ಕಾಣಿಸಿಕೊಂಡಿದ್ದ ಪಾಂಡಿಯನ್, ಚುನಾವಣಾ ಫಲಿತಾಂಶಗಳು ಪ್ರಕಟವಾದಾಗಿನಿಂದ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಚುನಾವಣಾ ಸೋಲಿನ ಪರಾಮರ್ಶೆಗೆ ನವೀನ್ ನಡೆಸುತ್ತಿರುವ ಸಭೆಗಳಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ. ಪಾಂಡಿಯನ್ ಕೊನೆಯ ಬಾರಿಗೆ ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಮಾಧ್ಯಮಗಳಿಗೆ ಕಾಣಿಸಿಕೊಂಡಿದ್ದರು.
"ತಮ್ಮ ಉತ್ತಮ ಕೆಲಸದ ನಂತರ, ಅವರು ಐಎಎಸ್ ಅಧಿಕಾರಿಯಾಗಿ ನಿವೃತ್ತಿ ಹೊಂದಿದರು ಮತ್ತು ನನ್ನ ಪಕ್ಷಕ್ಕೆ ಸೇರ್ಪಡೆಗೊಂಡರು ಮತ್ತು ಅತ್ಯುತ್ತಮವಾದ ಕೆಲಸಕ್ಕೆ ಕೊಡುಗೆ ನೀಡಿದರು. ಅವರು ಯಾವುದೇ ಹುದ್ದೆಯನ್ನು ಹೊಂದಿರಲಿಲ್ಲ, ಅವರು ಯಾವುದೇ ಕ್ಷೇತ್ರದಿಂದ ಈ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ, ಅವರು ಪ್ರಾಮಾಣಿಕತೆಯ ವ್ಯಕ್ತಿಯಾಗಿದ್ದು ಅವರನ್ನು ಸ್ಮರಿಸಬೇಕು ಎಂದು ನವೀನ್ ಪಟ್ನಾಯಕ್ ಹೇಳಿದ್ದಾರೆ.
ಇದೇ ವೇಳೆ ಪಾಂಡಿಯನ್ ತಮ್ಮ ರಾಜಕೀಯ ಉತ್ತರಾಧಿಕಾರಿಯಲ್ಲ ಎಂದು ಪುನರುಚ್ಚರಿಸಿದ ನವೀನ್, ತಮ್ಮ ರಾಜಕೀಯ ಉತ್ತರಾಧಿಕಾರಿ ಯಾರು ಎಂಬುದನ್ನು ರಾಜ್ಯದ ಜನರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.
Advertisement