ಜನರು ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟಿದ್ದಾರೆ, ಸರ್ವಾಧಿಕಾರಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ, ಯುಪಿಯಲ್ಲಿ ಧನ್ಯವಾದ ಯಾತ್ರೆ: ಮಲ್ಲಿಕಾರ್ಜುನ ಖರ್ಗೆ

ಇಂಡಿಯಾ ಬ್ಲಾಕ್ ಸಂಸತ್ತಿನ ಒಳಗೆ ಮತ್ತು ಹೊರಗೆ ಒಗ್ಗಟ್ಟಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಿಡಬ್ಲ್ಯುಸಿ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ
ಸಿಡಬ್ಲ್ಯುಸಿ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ
Updated on

ನವದೆಹಲಿ: ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಬಿಜೆಪಿಗೆ ಹೆಚ್ಚಿನ ಸ್ಥಾನ ಗಳಿಸಿ ಅಚ್ಚರಿ ಮೂಡಿಸಿದ್ದು ಈ ರಾಜ್ಯದಲ್ಲಿನ ಗೆಲುವು ದೇಶದ ಅತಿ ಹಳೆಯ ಪಕ್ಷದಲ್ಲಿ ಉತ್ಸಾಹಕ್ಕೆ ಕಾರಣವಾಗಿದೆ.

ಈ ನಿಟ್ಟಿನಲ್ಲಿ ರಾಜ್ಯದ ಜನತೆಗೆ ಕೃತಜ್ಞತೆ ಹೇಳಲು ಕಾಂಗ್ರೆಸ್ ಪಕ್ಷದ ವತಿಯಿಂದ ಜೂನ್ 11ರರಿಂದ 15ರವರೆಗೆ ಧನ್ಯವಾದ ಯಾತ್ರೆ ನಡೆಸಲು ಇಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ವಿಷಯ ಪ್ರಕಟಿಸಿದ್ದಾರೆ.

ದೇಶದ ಜನ ಬಿಜೆಪಿ ತಿರಸ್ಕರಿಸಿದ್ದಾರೆ: ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ನಾಯಕರು ಮತ್ತು ದೇಶಾದ್ಯಂತದ ಲಕ್ಷಾಂತರ ಕಾರ್ಯಕರ್ತರ ಅಚಲ ನಿರ್ಧಾರ ಮತ್ತು ಕಠಿಣ ಪರಿಶ್ರಮದಿಂದ ಕಾಂಗ್ರೆಸ್ ಈ ಬಾರಿ ಉತ್ತಮ ಸಾಧನೆ ತೋರಿಸಿದೆ ಎಂದ ಮಲ್ಲಿಕಾರ್ಜುನ ಖರ್ಗೆ,ಸಾರ್ವಜನಿಕರು ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಸರ್ವಾಧಿಕಾರಿ ಶಕ್ತಿಗಳಿಗೆ ಮತ್ತು ಸಂವಿಧಾನ ವಿರೋಧಿ ಶಕ್ತಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಭಾರತದ ಮತದಾರರು ಬಿಜೆಪಿಯ 10 ವರ್ಷಗಳ ವಿಭಜನೆ, ದ್ವೇಷ ಮತ್ತು ಧ್ರುವೀಕರಣದ ರಾಜಕೀಯವನ್ನು ತಿರಸ್ಕರಿಸಿದ್ದಾರೆ ಎಂದರು.

ಪ್ರತಿಕೂಲ ಸಂದರ್ಭಗಳಲ್ಲಿ ಚುನಾವಣೆಯಲ್ಲಿ ಹೋರಾಡಿ ಗೆದ್ದ ಲೋಕಸಭೆಗೆ ಹೊಸದಾಗಿ ಚುನಾಯಿತರಾದ ಕಾಂಗ್ರೆಸ್ ಸದಸ್ಯರನ್ನು CWC ಪರವಾಗಿ ಖರ್ಗೆ ಅಭಿನಂದಿಸಿದರು.

ಸಿಡಬ್ಲ್ಯುಸಿ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ
CWC ಸಭೆ: ಚುನಾವಣೆ ಫಲಿತಾಂಶ ಪರಾಮರ್ಶೆ; ವಿಪಕ್ಷ ನಾಯಕ ಸ್ಥಾನ ವಹಿಸಲು ರಾಹುಲ್ ಗಾಂಧಿಗೆ ಒತ್ತಡ

ಚುನಾವಣಾ ತಯಾರಿ ಮತ್ತು ಮೈತ್ರಿ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಕ್ಕಾಗಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಖರ್ಗೆ, ಸಂವಿಧಾನ, ಆರ್ಥಿಕ ಅಸಮಾನತೆ, ನಿರುದ್ಯೋಗ ಮತ್ತು ಸಾಮಾಜಿಕ ನ್ಯಾಯ ಮತ್ತು ಸೌಹಾರ್ದತೆಯನ್ನು ಸಾರ್ವಜನಿಕ ಸಮಸ್ಯೆಯಾಗಿ ರಾಹುಲ್ ಗಾಂಧಿಯವರು ದೇಶದ ಜನತೆಯ ಮನಮುಟ್ಟುವ ರೀತಿಯಲ್ಲಿ ತೋರಿಸಿದ್ದಾರೆ ಎಂದರು.

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಪ್ರಭಾವವನ್ನು ಎತ್ತಿ ಹಿಡಿದ ಖರ್ಗೆ, ಯಾತ್ರೆ ಸಾಗಿದ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇಕಡಾವಾರು ಮತ ಮತ್ತು ಸ್ಥಾನಗಳಲ್ಲಿ ಹೆಚ್ಚಳವಾಗಿದೆ ಎಂದು ಮಣಿಪುರದ ಉದಾಹರಣೆ ನೀಡಿದರು. ಅಲ್ಲಿ ಪಕ್ಷ ಎರಡೂ ಸ್ಥಾನಗಳನ್ನು ಗೆದ್ದಿತು. ನಾಗಾಲ್ಯಾಂಡ್, ಅಸ್ಸಾಂ ಮತ್ತು ಮೇಘಾಲಯದಂತಹ ಇತರ ಈಶಾನ್ಯ ರಾಜ್ಯಗಳಲ್ಲಿ ಗೆಲುವು ಸಿಕ್ಕಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದರು.

ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ಮತದಾರರಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪಕ್ಷದ ಸಾಧನೆ ಬಗ್ಗೆ ಗಮನ ಸೆಳೆದರು. ನಗರ ಮತದಾರರಲ್ಲಿ ಪಕ್ಷದ ಪ್ರಭಾವವನ್ನು ಬಲಪಡಿಸಲು ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ ಎಂದರು. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಲೋಕಸಭೆಯಲ್ಲಿ ಆ ಯಶಸ್ಸನ್ನು ಪುನರಾವರ್ತಿಸಲು ವಿಫಲವಾಗಿದೆ ಎಂದು ಆತ್ಮವಿಮರ್ಶೆ ಮಾಡಿಕೊಂಡರು.

ಇಂದು ನಮ್ಮ ಯಶಸ್ಸಿನಲ್ಲಿ ಇಂಡಿಯಾ ಮೈತ್ರಿಕೂಟದ ಪಾಲುದಾರಿಕೆ ಕೂಡ ಇದೆ. ಇದರಲ್ಲಿ ಪ್ರತಿಯೊಂದು ಪಕ್ಷವು ವಿವಿಧ ರಾಜ್ಯಗಳಲ್ಲಿ ಅದರ ಗೊತ್ತುಪಡಿಸಿದ ಪಾತ್ರವನ್ನು ವಹಿಸಿದೆ, ಪ್ರತಿ ಪಕ್ಷವು ಇನ್ನೊಂದಕ್ಕೆ ಕೊಡುಗೆ ನೀಡಿದೆ. ಇಂಡಿಯಾ ಮೈತ್ರಿಕೂಟ ಮುಂದುವರೆಯಬೇಕು ಎಂಬುದು ನಮ್ಮ ಸಂಕಲ್ಪ. ಸಂಸತ್ತಿನಲ್ಲಿ ಮತ್ತು ಹೊರಗೆ ನಾವು ಒಗ್ಗಟ್ಟಾಗಿ ಮತ್ತು ಸಾಮೂಹಿಕವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಲೋಕಸಭೆ ಚುನಾವಣೆಯಲ್ಲಿ ದೇಶದ ಜನತೆ ನೀಡಿರುವ ತೀರ್ಪು ವಿಭಜನೆ ಮತ್ತು ದ್ವೇಷದ ರಾಜಕಾರಣ ವಿರುದ್ಧ ನಿರ್ಣಾಯಕ ಆದೇಶವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ. ದ್ವೇಷ ರಾಜಕಾರಣ ವಿರುದ್ಧ ಇಂಡಿಯಾ ಮೈತ್ರಿಕೂಟವು ಸಂಸತ್ತಿನ ಒಳಗೆ ಮತ್ತು ಹೊರಗೆ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದರು. ಪಕ್ಷ ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಜನರ ನಡುವೆ 24 ಗಂಟೆ 365 ದಿನವೂ ಅವರ ಕೆಲಸ ಮುಂದುವರಿಯುತ್ತದೆ ಎಂದು ಖರ್ಗೆ ಹೇಳಿದರು.

ರೈತರು, ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡುವ ಸಂಘಟನೆಗಳು, ನಾಗರಿಕ ಸಮಾಜ ಗುಂಪುಗಳು, ಎನ್‌ಜಿಒಗಳು, ಸಣ್ಣ ವ್ಯಾಪಾರಿಗಳು, ವಕೀಲರು, ಬುದ್ಧಿಜೀವಿಗಳು, ಸ್ವತಂತ್ರ ಮಾಧ್ಯಮಗಳು ಮತ್ತು ಇತರರಿಗೆ ಮಲ್ಲಿಕಾರ್ಜುನ ಖರ್ಗೆ ಧನ್ಯವಾದ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com