
ನವದೆಹಲಿ: ಈ ವರ್ಷ ಅಂಕಗಳ ಹೆಚ್ಚಳ ವಿವಾದದ ನಡುವೆ 67 ಅಭ್ಯರ್ಥಿಗಳು ಪ್ರಥಮ ರ‍್ಯಾಂಕ್ ಗಳಿಸುವ ಮೂಲಕ ದಾಖಲೆ ಬರೆದಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಪದವಿ) (NEET-UG) ಪರೀಕ್ಷೆಯನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), ಭೌತಶಾಸ್ತ್ರ ಪರೀಕ್ಷೆಯ ಉತ್ತರ ಕೀಲಿಯಲ್ಲಿನ ಪರಿಷ್ಕರಣೆ ಮತ್ತು ಸಮಯದ ನಷ್ಟಕ್ಕೆ ಪರಿಹಾರದ ಅಂಕಗಳನ್ನು ನೀಡಿದ್ದರಿಂದ ಅಂಕ ನೀಡಿಕೆಯಲ್ಲಿ ಏರುಪೇರು ಉಂಟಾಯಿತು ಎಂದು ತಿಳಿಸಿದೆ.
720ಕ್ಕೆ 720 ಅಂಕಗಳನ್ನು ಗಳಿಸಿದ 67 ಅಭ್ಯರ್ಥಿಗಳಲ್ಲಿ, 44 ಅಭ್ಯರ್ಥಿಗಳು ಭೌತಶಾಸ್ತ್ರದ ಉತ್ತರ ಕೀಲಿಯಲ್ಲಿ ಒಂದು ಪರಿಷ್ಕರಣೆಯಿಂದ ಪ್ರಯೋಜನ ಪಡೆದರು. ಆರು ಅಭ್ಯರ್ಥಿಗಳಿಗೆ ಸಮಯ ನಷ್ಟಕ್ಕೆ ಪರಿಹಾರ ಅಂಕಗಳನ್ನು ನೀಡಲಾಯಿತು ಎಂದು ಎನ್ ಟಿಎ ಸ್ಪಷ್ಟಪಡಿಸಿದೆ. ಈ ಬಾರಿ ನೀಟ್ ಪರೀಕ್ಷೆಯಲ್ಲಿ 67 ವಿದ್ಯಾರ್ಥಿಗಳು ಒಂದೇ ರ್ಯಾಂಕ್ ಗಳಿಸಿದ್ದು ಹೇಗೆ ಎಂಬ ಸಂಶಯ ದೇಶಾದ್ಯಂತ ವಿದ್ಯಾರ್ಥಿಗಳು, ಪೋಷಕರು ಮತ್ತು ವೈದ್ಯಕೀಯ ಲೋಕದಲ್ಲಿ ಉಂಟಾಗಿತ್ತು.
ನೀಟ್ ಪರೀಕ್ಷೆಯ ಆರು ಟಾಪರ್‌ಗಳು ಹರ್ಯಾಣದ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದವರು ಎಂಬುದನ್ನು ಎನ್ ಟಿಎ ನಿರಾಕರಿಸಿದೆ. ಒಂದೇ ಕೇಂದ್ರದ ಆರು ವಿದ್ಯಾರ್ಥಿಗಳು 720ಕ್ಕೆ 720 ಅಂಕ ಗಳಿಸಿದ್ದು, ಫಲಿತಾಂಶದ ಸಮಗ್ರತೆಯನ್ನು ಪ್ರಶ್ನಿಸುವಂತೆ ಕಾಂಗ್ರೆಸ್ ಪಕ್ಷ ಕಳವಳ ವ್ಯಕ್ತಪಡಿಸಿತ್ತು. ಜೂನ್ 4 ರಂದು ಫಲಿತಾಂಶ ಪ್ರಕಟವಾದಾಗಿನಿಂದ ಫಲಿತಾಂಶ ವಿವಾದಕ್ಕೆ ಸಿಲುಕಿದೆ.
NTA ಹೇಳಿಕೆಯಲ್ಲಿ “ಪ್ರತಿ ವರ್ಷ ಅಭ್ಯರ್ಥಿಗಳ ಒಟ್ಟಾರೆ ಕಾರ್ಯಕ್ಷಮತೆಯನ್ನು ಆಧರಿಸಿ ಕಟ್-ಆಫ್ ಅಂಕಗಳನ್ನು ನಿರ್ಧರಿಸಲಾಗುತ್ತದೆ. ಕಟ್-ಆಫ್‌ನಲ್ಲಿನ ಹೆಚ್ಚಳವು ಪರೀಕ್ಷೆಯ ಸ್ಪರ್ಧಾತ್ಮಕ ಸ್ವರೂಪ ಮತ್ತು ಅಭ್ಯರ್ಥಿಗಳ ಈ ವರ್ಷದ ಉನ್ನತ ಕಾರ್ಯಕ್ಷಮತೆಯ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ.
ಕಳೆದ ವರ್ಷ 20,38,596 ಅಭ್ಯರ್ಥಿಗಳು ನೀಟ್-ಯುಜಿ ಪರೀಕ್ಷೆಗೆ ಹಾಜರಾಗಿದ್ದರೆ, ಈ ವರ್ಷ ಹಾಜರಾದ ಅಭ್ಯರ್ಥಿಗಳ ಸಂಖ್ಯೆ 23,33,297 ಕ್ಕೆ ಏರಿಕೆಯಾಗಿತ್ತು.
Advertisement