ರಾಮೋಜಿ ರಾವ್ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಚಂದ್ರಬಾಬು ನಾಯ್ಡು!
ಹೈದರಾಬಾದ್: ಮಾಧ್ಯಮ ಲೋಕದ ದಿಗ್ಗಜ 'ಈನಾಡು' ಸಮೂಹದ ಅಧ್ಯಕ್ಷ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರಾಮೋಜಿ ರಾವ್ (87) ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ರಾಮೋಜಿ ಫಿಲಂ ಸಿಟಿಯಲ್ಲಿ ಸಕಲ ವಿಧಿ ವಿಧಾನ, ಸರಕಾರಿ ಗೌರವಗಳೊಂದಿಗೆ ಭಾನುವಾರ ನೆರವೇರಿತು. ರಾಮೋಜಿ ಅವರ ಪುತ್ರ ಕಿರಣ್ ಅವರು ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿತು.
ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಮೋಜಿ ರಾವ್ ಅವರ ಅಂತ್ಯಕ್ರಿಯೆ ವೇಳೆ ಭಾಗವಹಿಸಿದ್ದರು. ಅಂತ್ಯಕ್ರಿಯೆ ನಡೆಯುವ ಸ್ಥಳದ ಸಮೀಪ ಅವರು ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು. ಈ ಮೂಲಕ ಬಹುಕಾಲದ ಆತ್ಮೀಯ ಬಾಂಧವ್ಯಕ್ಕೆ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.
ಸುದ್ದಿ ಮತ್ತು ಮನರಂಜನಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಾಮೋಜಿ ರಾವ್ ಅವರು ಶನಿವಾರ ಮುಂಜಾನೆ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಅವಿಭಜಿತ ಆಂಧ್ರ ಪ್ರದೇಶದಲ್ಲಿ ಈನಾಡು ಪತ್ರಿಕೆ ಮತ್ತು ಈಟಿವಿ ಗ್ರೂಪ್ ವಾಹಿನಿಗಳ ಮೂಲಕ ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿದ್ದ ರಾಮೋಜಿ ರಾವ್ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.
ಆಂಧ್ರ ಪ್ರದೇಶ ಸರ್ಕಾರ ಜೂನ್ 9 ಮತ್ತು 10 ರಂದು ರಾಜ್ಯ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ. ರಾಜ್ಯ ಶೋಕಾಚರಣೆಯ ಸಂದರ್ಭದಲ್ಲಿ, ರಾಜ್ಯಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಮನರಂಜನೆ ಇರುವುದಿಲ್ಲ ಎಂದು ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ. ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯಾತಿಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ