
ಗ್ಯಾಂಗ್ಟಕ್: ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರು ಸತತ 2ನೇ ಬಾರಿಗೆ ಈಶಾನ್ಯ ಭಾರತದ ರಾಜ್ಯ ಸಿಕ್ಕಿಂನ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ರಾಜಧಾನಿ ಗ್ಯಾಂಗ್ಟಕ್ ನ ಪಾಲ್ಜೋರ್ ಸ್ಟೇಡಿಯಂನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಪ್ರೇಮ್ ಸಿಂಗ್ ತಮಾಂಗ್ ಮತ್ತು ಅವರ ಮಂತ್ರಿ ಮಂಡಲಕ್ಕೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.
ಇತ್ತೀಚೆಗೆ ಮುಕ್ತಾಯವಾದ ಸಿಕ್ಕಿಂ ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (SKM) 32 ಸ್ಥಾನಗಳ ಪೈಕಿ 31 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ ಹಿಮಾಲಯ ರಾಜ್ಯ ಸಿಕ್ಕಿಂನಲ್ಲಿನ ಅಸೆಂಬ್ಲಿ ಚುನಾವಣೆಯಲ್ಲಿ ಪ್ರತಿಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (SDF) ಏಕೈಕ ಸ್ಥಾನಕ್ಕೆ ಸೀಮಿತವಾಗಿದೆ.
ಈ ಹಿಂದೆ ಸಿಕ್ಕಿಂ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ತಮ್ಮ ಪಕ್ಷಕ್ಕೆ ಅಭೂತಪೂರ್ವ ಜಯ ಸಂದ ಬೆನ್ನಲ್ಲೇ ಮಾತನಾಡಿದ್ದ ತಮಂಗ್, 'ಸಿಕ್ಕಿಂನ ಅತ್ಯಂತ ಶಾಂತಿಯುತ ಚುನಾವಣೆಗೆ ರಾಜ್ಯವು ಸಾಕ್ಷಿಯಾಗಿದೆ. ಪಕ್ಷದ ಗೆಲುವು 'ದಾಖಲೆ'ಯಾಗಿದೆ. ಪಕ್ಷವು ಅಧಿಕಾರಕ್ಕೆ ಮರಳಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು.
5 ವರ್ಷಗಳಲ್ಲಿ, ನಾವು ಚುನಾವಣೆಯ ಸಮಯದಲ್ಲಿ ಮಾಡಿದ ಎಲ್ಲಾ ಘೋಷಣೆಗಳನ್ನು ನಾವು ಈಡೇರಿಸುತ್ತೇವೆ. ನನ್ನ ಎಲ್ಲಾ ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಸಾರ್ವಜನಿಕರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದು ಅತ್ಯಂತ ಶಾಂತಿಯುತ ಚುನಾವಣೆಯಾಗಿದೆ ಎಂದು ಹೇಳಿದ್ದರು.
ತಮಾಂಗ್ ಅವರು ರೆನಾಕ್ ಅಸೆಂಬ್ಲಿ ಸ್ಥಾನದಿಂದ ಎಸ್‌ಡಿಎಫ್‌ನ ಸೋಮ್ ನಾಥ್ ಪೌಡಿಯಾಲ್ ಅವರನ್ನು 7,396 ಮತಗಳಿಂದ ಸೋಲಿಸಿದ್ದರು. ಸಿಕ್ಕಿಂನಲ್ಲಿ 32 ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಲೋಕಸಭೆ ಚುನಾವಣೆಯೊಂದಿಗೆ ಏಕಕಾಲದಲ್ಲಿ ಮತದಾನ ನಡೆದಿತ್ತು. 1989 ಮತ್ತು 2009 ರಲ್ಲಿ ಸಿಕ್ಕಿಂ ಸಂಗ್ರಾಮ್ ಪರಿಷತ್ ಮತ್ತು ಎಸ್‌ಡಿಎಫ್‌ನಿಂದ ಇದೇ ರೀತಿಯ ಫಲಿತಾಂಶ ಪಡೆದಿತ್ತು. ಇದಾದ ಬಳಿಕ 3ನೇ ಬಾರಿಗೆ ಅಂತಹುದೇ ಫಲಿತಾಂಶ ಬಂದಿದೆ.
Advertisement