
ಅಮರಾವತಿ: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಒಂದು ದಿನಕ್ಕೂ ಮೊದಲು, ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಮಂಗಳವಾರ ಅಮರಾವತಿ ರಾಜ್ಯದ ಏಕೈಕ ರಾಜಧಾನಿಯಾಗಲಿದೆ ಎಂದು ಘೋಷಿಸಿದ್ದಾರೆ.
ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಎನ್‌ಡಿಎ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾದ ಬಳಿಕ ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಶಾಸಕರ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾಯ್ಡು ಈ ಘೋಷಣೆ ಮಾಡಿದರು.
ನಮ್ಮ ಸರ್ಕಾರದಲ್ಲಿ ಮೂರು ರಾಜಧಾನಿಗಳ ನೆಪದಲ್ಲಿ ಆಟ ನಡೆಯುವುದಿಲ್ಲ. ಇನ್ಮುಂದೆ ನಮ್ಮ ರಾಜಧಾನಿ ಅಮರಾವತಿ. ಅಮರಾವತಿಯೇ ಆಂಧ್ರ ಪ್ರದೇಶದ ಏಕೈಕ ರಾಜಧಾನಿ ಎಂದು ನಾಯ್ಡು ಹೇಳಿದರು.
ವಿಭಜನೆ ನಂತರ ಅಸ್ತಿತ್ವಕ್ಕೆ ಬಂದ ಆಂಧ್ರ ಪ್ರದೇಶದ ಮೊದಲ ಮುಖ್ಯಮಂತ್ರಿಯಾಗಿ 2014 ರಿಂದ 2019ರವರೆಗೆ ಅಧಿಕಾರದಲ್ಲಿದ್ದ ಟಿಡಿಪಿ ವರಿಷ್ಠ ಎನ್ ಚಂದ್ರಬಾಬು ನಾಯ್ಡು, ಅಮರಾವತಿಯನ್ನು ರಾಜ್ಯದ ರಾಜಧಾನಿಯಾಗಿ ಘೋಷಿಸಿದ್ದರು.
ವಿಜಯವಾಡ ಮತ್ತು ಗುಂಟೂರು ನಗರಗಳ ನಡುವೆ ಇರುವ ಅಮರಾವತಿಯನ್ನು ಪರಿಸರಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಹೊಂದಿದ ನಗರವನ್ನಾಗಿ ರೂಪಿಸುವುದು ನಾಯ್ಡು ಅವರ ಯೋಜನೆಯಾಗಿತ್ತು. ಆದರೆ, ಆದರೆ, 2019 ರಲ್ಲಿ ಟಿಡಿಪಿ ಅಧಿಕಾರವನ್ನು ಕಳೆದುಕೊಂಡಾಗ ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ ಭರ್ಜರಿ ಜಯ ಸಾಧಿಸಿ ಅಧಿಕಾರಕ್ಕೇರಿದಾಗ ನಾಯ್ಡು ಅವರ ಈ ಯೋಜನೆಯನ್ನು ಕೈಬಿಟ್ಟಿತ್ತು ಮತ್ತು ಮೂರು ರಾಜಧಾನಿಗಳ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿತು.
ಇದೀಗ ಟಿಡಿಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿರುವ ಕಾರಣ, ಈ ಯೋಜನೆಗೆ ಮರುಜೀವ ಸಿಕ್ಕಿದೆ. ಆಂಧ್ರ ಪ್ರದೇಶಕ್ಕೆ ಅಮರಾವತಿಯೇ ಏಕೈಕ ರಾಜಧಾನಿಯಾಗಲಿದೆ ಎಂದು ನಾಯ್ಡು ಘೋಷಿಸಿದ್ದಾರೆ.
ಟಿಡಿಪಿ, ಬಿಜೆಪಿ ಮತ್ತು ಜನಸೇನಾ ಎನ್‌ಡಿಎ ಮೈತ್ರಿಕೂಟ ರಾಜ್ಯದಲ್ಲಿ ಇತ್ತೀಚೆಗೆ ಏಕಕಾಲಕ್ಕೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ 164 ವಿಧಾನಸಭೆ ಮತ್ತು 21 ಲೋಕಸಭೆ ಸ್ಥಾನಗಳೊಂದಿಗೆ ಭರ್ಜರಿ ಜಯ ಸಾಧಿಸಿದೆ.
Advertisement