
ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಅವರ ಸಚಿವ ಸಂಪುಟದ ಸಮ್ಮುಖದಲ್ಲಿ ಪುರಿಯ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಭಕ್ತರಿಗಾಗಿ ಗುರುವಾರ ಬೆಳಗ್ಗೆ ತೆರೆಯಲಾಯಿತು.
ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಸಮಯದಲ್ಲಿ ಮುಚ್ಚಲಾಗಿದ್ದ 12 ನೇ ಶತಮಾನದ ದೇಗುಲದ ಮೂರು ದ್ವಾರಗಳನ್ನು ಭಗವಾನ್ ಜಗನ್ನಾಥನ 'ಮಂಗಳ ಆರತಿ' ಆಚರಣೆಯ ನಂತರ ಮತ್ತೆ ತೆರೆಯಲಾಯಿತು.
ಮುಖ್ಯಮಂತ್ರಿ, ಇಬ್ಬರು ಉಪ ಮುಖ್ಯಮಂತ್ರಿಗಳು, ಸಚಿವರು, ಹಲವು ಬಿಜೆಪಿ ಸಂಸದರು ಮತ್ತು ಪಕ್ಷದ ಮುಖಂಡರು ದೇವಾಲಯಕ್ಕೆ ಭೇಟಿ ನೀಡಿ ಜಗನ್ನಾಥ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು. ಅವರು ದೇವಾಲಯದ ಸಂಕೀರ್ಣದ ಸುತ್ತಲೂ 'ಪರಿಕ್ರಮ'ವನ್ನೂ ನಡೆಸಿದರು.
ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ, ಬಿಜೆಪಿ ಸರ್ಕಾರವು ನಿನ್ನೆ ಬುಧವಾರ ಸಂಜೆ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ತೆರೆಯಲು ತನ್ನ ಮೊದಲ ನಿರ್ಧಾರವನ್ನು ತೆಗೆದುಕೊಂಡಿದೆ. ಇಂದು, 'ಮಂಗಳ ಆರತಿ' ಆಚರಣೆಯ ನಂತರ ಬೆಳಗ್ಗೆ 6.30 ಕ್ಕೆ ಗೇಟ್‌ಗಳನ್ನು ಮತ್ತೆ ತೆರೆಯಲಾಯಿತು ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಪುರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಅಗತ್ಯವಿದ್ದರೆ ದೇಗುಲಕ್ಕೆ ಭಕ್ತರ ಹರಿವನ್ನು ಸುಗಮಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದರು.
ದೇವಾಲಯದ ಉತ್ತಮ ನಿರ್ವಹಣೆ ಮತ್ತು ಅಭಿವೃದ್ಧಿಗಾಗಿ ಒಡಿಶಾ ಸರ್ಕಾರವು 500 ಕೋಟಿ ರೂಪಾಯಿ ಕಾರ್ಪಸ್ ನಿಧಿಯನ್ನು ಸ್ಥಾಪಿಸಲು ನಿರ್ಧರಿಸಿದೆ. ಬರುವ ರಾಜ್ಯ ಬಜೆಟ್‌ನಲ್ಲಿ ಇದನ್ನು ಒದಗಿಸಲಾಗುವುದು ಎಂದು ಮಾಝಿ ಹೇಳಿದರು.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ದೇವಾಲಯದ ಎಲ್ಲಾ ಬಾಗಿಲುಗಳನ್ನು ತೆರೆಯುವುದು ಪ್ರಮುಖ ಭರವಸೆಯಾಗಿತ್ತು. ಹಿಂದಿನ ಬಿಜೆಡಿ ಸರ್ಕಾರವು COVID-19 ಸಾಂಕ್ರಾಮಿಕ ರೋಗದಿಂದ ನಾಲ್ಕು ಗೇಟ್‌ಗಳಲ್ಲಿ ಮೂರನ್ನು ಮುಚ್ಚಿತ್ತು. ಭಕ್ತರಿಗೆ ಸಿಂಗದ್ವಾರ (ಸಿಂಹದ್ವಾರ) ಮೂಲಕ ಮಾತ್ರ ಪ್ರವೇಶಿಸಲು ಅವಕಾಶ ನೀಡಲಾಯಿತು, ಆದರೆ ದೇವಾಲಯದ ಇತರ ಮೂರು ಕಡೆ ಇರುವ ದ್ವಾರಗಳನ್ನು ಮುಚ್ಚಲಾಗಿದ್ದು, ಭಕ್ತರಿಗೆ ಅನಾನುಕೂಲತೆ ಉಂಟಾಗಿತ್ತು.
ಒಡಿಶಾದ ಕರಾವಳಿ ನಗರವಾದ ಪುರಿಯಲ್ಲಿರುವ ಈ ದೇವಾಲಯ ಶ್ರೀಕೃಷ್ಣ ಭಗವಾನ್ ಜಗನ್ನಾಥ ಎಂದು ಪೂಜಿಸಲಾಗುತ್ತದೆ. ನಾಲ್ಕು ಬಾರಿ ಶಾಸಕ ಮತ್ತು ಕಿಯೋಂಜಾರ್ ಬುಡಕಟ್ಟು ನಾಯಕ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಮುಖ್ಯಮಂತ್ರಿಯಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದರು.
Advertisement