
ಮುಂಬೈ: ಐಸ್ ಕ್ರೀಮ್ ಗಾಗಿ ಆರ್ಡರ್ ಮಾಡಿದ್ದ ವ್ಯಕ್ತಿ ತಾನು ಸೇವಿಸುತ್ತಿದ್ದ ಪದಾರ್ಥದಲ್ಲಿ ಮನುಷ್ಯನ ಬೆರಳು ಇದ್ದದ್ದನ್ನು ಕಂಡು ದಂಗಾಗಿದ್ದಾರೆ.
ಮುಂಬೈ ನಲ್ಲಿ ಈ ಘಟನೆ ವರದಿಯಾಗಿದ್ದು, ಮಲಾದ್ ಉಪನಗರದ ನಿವಾಸಿಯಾಗಿರುವ ವೈದ್ಯ ಓರ್ಲೆಮ್ ಬ್ರಾಂಡನ್ ಸೆರಾವೊ Yummo Ice Creams ನಿಂದ ಕೋನ್ ಐಸ್ ಕ್ರೀಮ್ ನ್ನು ಆನ್ ಲೈನ್ ಮೂಲಕ ತರಿಸಿದ್ದರು. ಕೋನ್ ಐಸ್ ಕ್ರೀಮ್ ನ್ನು ತೆರೆಯುತ್ತಿದ್ದಂತೆಯೇ ಅದರಲ್ಲಿ ಮನುಷ್ಯನ ಬೆರಳು ಪತ್ತೆಯಾಗಿದೆ.
ಆರಂಭದಲ್ಲಿ ಬೆರಳನ್ನು ಗಮನಿಸಿದ ವೈದ್ಯರು ಐಸ್ ಕ್ರೀಮ್ ಗೆ ಹಾಕಿರಬಹುದಾದ ವಿವಿಧ ಕಾಯಿ (nut)ಗಳ ಪೈಕಿ ಅಥವಾ ಚಾಕೊಲೇಟ್ ಪೈಕಿ ಇದೂ ಒಂದು ಇರಬಹುದು ಎಂದು ಭಾವಿಸಿದ್ದರು. ಆದರೆ ಅದನ್ನು ಹೊರತೆಗೆದು ನೋಡಿದಾಗ ಅದು ಮನುಷ್ಯನ ಬೆರಳು ಎಂಬುದು ತಿಳಿದುಬಂದಿದೆ.
"ನಾನು ವೈದ್ಯನಾಗಿದ್ದು, ಮನುಷ್ಯನ ದೇಹದ ಭಾಗಗಳು ಹೇಗೆ ಕಾಣುತ್ತವೆ ಎಂಬುದರ ಬಗ್ಗೆ ಅರಿವಿದೆ. ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಉಗುರು, ಬೆರಳಚ್ಚು ಇರುವುದು ಪತ್ತೆಯಾಯಿತು, ಕೊನೆಗೆ ಅದು ಹೆಬ್ಬೆರಳನ್ನು ಹೋಲುತ್ತಿತ್ತು. ಅದನ್ನು ಕಂಡು ನಾನು ಆಘಾತಕ್ಕೊಳಗಾದೆ ಎಂದು ವೈದ್ಯ ಓರ್ಲೆಮ್ ಬ್ರಾಂಡನ್ ಸೆರಾವೊ ಹೇಳಿದ್ದಾರೆ.
ಮಲಾಡ್ ಪೊಲೀಸ್ ಠಾಣೆಯಲ್ಲಿ ವೈದ್ಯರು ದೂರು ನೀಡಿದ್ದಾರೆ. ಯಮ್ಮೋ ವಿರುದ್ಧ ಆಹಾರ ಕಲಬೆರಕೆ ಮತ್ತು ಮಾನವ ಜೀವಕ್ಕೆ ಅಪಾಯ ತಂದಿರುವ ಪ್ರಕರಣ ದಾಖಲಾಗಿದೆ. ಪೊಲೀಸರು ಐಸ್ ಕ್ರೀಮ್ ಇದ್ದ ಕೋನ್ ನ್ನು ವಶಕ್ಕೆ ಪಡೆದಿದ್ದು ಬೆರಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಿದ್ದಾರೆ. ಆಹಾರ ಪದಾರ್ಥದಲ್ಲಿ ದೇಹದ ಭಾಗ ಪತ್ತೆಯಾಗಿರುವುದರಿಂದ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಫೋಟೋ ಐಸ್‌ಕ್ರೀಮ್‌ನ ಮೇಲ್ಭಾಗದಿಂದ ಮಾನವನ ಬೆರಳು ಅಂಟಿಕೊಂಡಿರುವುದನ್ನು ತೋರಿಸುತ್ತದೆ.
ಇದು ಅಪ್ಲಿಕೇಶನ್‌ನಿಂದ ಕಲುಷಿತ ಆಹಾರ ವಿತರಣೆಯ ಮೊದಲ ಘಟನೆಯಲ್ಲ. ಇತ್ತೀಚೆಗೆ, ಜೆಪ್ಟೊ ಮೂಲಕ ಆರ್ಡರ್ ಮಾಡಿದ ಕಿತ್ತಳೆಯಲ್ಲಿ ಜೀವಂತ ಹುಳು ಕಂಡುಬಂದಿದೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದರು. ಕಿತ್ತಳೆ (orange)ಯಲ್ಲಿ ಹುಳು ಚಲಿಸುತ್ತಿರುವ ವಿಡಿಯೋವನ್ನು ಗ್ರಾಹಕರು ಪೋಸ್ಟ್ ಮಾಡಿದ್ದರು.
Advertisement