
ತಿರುವನಂತಪುರಂ: ಕೇಂದ್ರದ ಬಿಜೆಪಿ ನೇತೃತ್ವದ ನೂತನ ಎನ್‌ಡಿಎ ಸರ್ಕಾರದಲ್ಲಿ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಸಚಿವರಾಗಿದ್ದಕ್ಕೆ ಶನಿವಾರ ಕಾಂಗ್ರೆಸ್ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಜೆಡಿಎಸ್ ಕೇರಳದಲ್ಲಿ ಪಿಣರಾಯಿ ನೇತೃತ್ವದಲ್ಲಿ ಎಲ್ ಡಿಎಫ್ ಸರ್ಕಾರದಲ್ಲಿ ಮೈತ್ರಿ ಹೊಂದಿದೆ. ಇತ್ತ ಕುಮಾರಸ್ವಾಮಿ ಅವರು ಕೇಂದ್ರದ ಎನ್ ಡಿಎ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಾಗಿ ಕೇರಳದಲ್ಲಿ ಎಲ್‌ಡಿಎಫ್-ಎನ್‌ಡಿಎ ಮೈತ್ರಿಕೂಟ ಆಡಳಿತ ನಡೆಸುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಜೆಡಿ(ಎಸ್) ಎನ್‌ಡಿಎಗೆ ಸೇರ್ಪಡೆಗೊಂಡಿತ್ತು. ಆದರೆ ಸಿಎಂ ವಿಜಯನ್ ಮತ್ತು ಆಡಳಿತಾರೂಢಸಿಪಿಐ(ಎಂ) ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ ಮತ್ತು ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಕೇರಳ ಸಿಎಂ ವಿಜಯನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಅವರು, ಜೆಡಿಎಸ್ ರಾಜ್ಯ ಘಟಕವನ್ನು ಎಡರಂಗದಲ್ಲಿ ಮುಂದುವರಿಸಲು ಅವಕಾಶ ನೀಡುವ ಮೂಲಕ ಅವರ ದ್ವಂದ್ವ ನೀತಿ ಬಯಲಾಗಿದೆ ಎಂದು ಹೇಳಿದ್ದಾರೆ.
ಮಾರ್ಕ್ಸ್‌ವಾದಿ ಪಕ್ಷದ ಮೌನ ಸಮ್ಮತಿಯಿಂದಲೇ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕ, ಸಿಪಿಐ(ಎಂ) ಜೆಡಿಎಸ್‌ಗೆ ‘ರಾಜಕೀಯ ರಕ್ಷಣೆ’ ನೀಡುತ್ತಿದೆ. ಕೇಂದ್ರ ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಕೇರಳದಲ್ಲಿ ಎಲ್ ಡಿಎಫ್ ಮತ್ತು ಎನ್ ಡಿಎ ನಡುವೆ ಒಳ ಒಪ್ಪಂದವಾಗಿದೆ ಎಂದು ದೂರಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಸಂಬಂಧಿಸಿದಂತೆ ಎಲ್ ಡಿಎಫ್ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ವಿ ಡಿ ಸತೀಶನ್ ಅವರು ಒತ್ತಾಯಿಸಿದ್ದಾರೆ.
Advertisement