
ಮುಂಬೈ: ಮಹಾರಾಷ್ಟ್ರದ ಲೋಕಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ(ಎಂವಿಎ) ಗೆಲುವು ಅಂತ್ಯವಲ್ಲ, ಇದು ಆರಂಭ ಎಂದು ಶಿವಸೇನೆ(ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಶನಿವಾರ ಹೇಳಿದ್ದಾರೆ ಮತ್ತು ಮುಂಬರುವ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಮೈತ್ರಿಕೂಟ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇಂದು ದಕ್ಷಿಣ ಮುಂಬೈನಲ್ಲಿ ನಡೆದ MVA ಸದಸ್ಯರ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಕುರಿತು ಮೂರು ಪಕ್ಷಗಳು ಪೂರ್ವಭಾವಿ ಸಭೆಯನ್ನೂ ನಡೆಸಿವೆ. ಭಾರತೀಯ ಜನತಾ ಪಕ್ಷದ ಗೆಲುವಿನ ಮಿಥ್ಯೆ ಎಷ್ಟು ಪೊಳ್ಳು ಎಂಬುದನ್ನು ರಾಜ್ಯದ ಜನರು ತೋರಿಸಿದ್ದಾರೆ ಎಂದು ಹೇಳಿದರು.
"ಮಹಾ ವಿಕಾಸ್ ಅಘಾಡಿ(ಎಂವಿಎ)ಗೆ ಲೋಕಸಭೆ ಚುನಾವಣೆ ಗೆಲುವು ಅಂತ್ಯವಲ್ಲ, ಇದು ಆರಂಭ" ಎಂದು ಮಾಜಿ ಮುಖ್ಯಮಂತ್ರಿ ಠಾಕ್ರೆ ತಿಳಿಸಿದರು.
ಈ ವೇಳೆ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾವಣೆ ಸನ್ನಿಹಿತವಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ NCP (SP) ಮುಖ್ಯಸ್ಥ ಶರದ್ ಪವಾರ್ರ್, "ಎಂವಿಎಗೆ ಉತ್ತಮ ರಾಜಕೀಯ ವಾತಾವರಣವನ್ನು ಕಲ್ಪಿಸಿದ್ದಕ್ಕಾಗಿ ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ" ಹೇಳುತ್ತೇವೆ ಎಂದರು.
ಇತ್ತೀಚಿಗಷ್ಟೇ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ 13 ಸ್ಥಾನಗಳನ್ನು ಗೆದ್ದುಕೊಂಡಿದೆ. 2019 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಮಾತ್ರ ಗೆದ್ದಿತ್ತು, ಶಿವಸೇನೆ(ಯುಬಿಟಿ) ಒಂಬತ್ತು ಮತ್ತು ಎನ್‌ಸಿಪಿ(ಎಸ್‌ಪಿ) ಎಂಟು ಸ್ಥಾನಗಳನ್ನು ಗೆದ್ದುಕೊಂಡಿವೆ.
Advertisement