
ನವದೆಹಲಿ: ಸರ್ಕಾರ ರಚನೆಗೆ ಮೈತ್ರಿಕೂಟದ ಸಂಖ್ಯೆಯನ್ನು ಹೆಚ್ಚಿಸಲು ಟಿಡಿಪಿ ಅಥವಾ ಜೆಡಿಯು ಅನ್ನು ಸಂಪರ್ಕಿಸುವ ಬಗ್ಗೆ ಇಂಡಿಯಾ ಮೈತ್ರಿಕೂಟದಲ್ಲಿ ಇನ್ನೂ ಯಾವುದೇ ಚರ್ಚೆಯಾಗಿಲ್ಲ ಎಂದು ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಬುಧವಾರ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಫಲಿತಾಂಶ ಮತ್ತು ಕೇಂದ್ರದಲ್ಲಿ ಸರ್ಕಾರ ರಚಿಸಲು ಜನತಾ ದಳ (ಯುನೈಟೆಡ್) (ಜೆಡಿಯು) ಮತ್ತು ತೆಲುಗು ದೇಶಂ ಪಕ್ಷವನ್ನು (ಟಿಡಿಪಿ) ಸೇರಿಸಿಕೊಳ್ಳುವ ಬಗ್ಗೆ ಚರ್ಚಿಸಲು ಇಂದು ಸಂಜೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆಯ ಮುನ್ನ ಪವಾರ್ ಈ ಹೇಳಿಕೆ ನೀಡಿದ್ದಾರೆ.
ಮೋದಿ ಜನಪ್ರಿಯತೆ ಮೇಲೆಯೇ ಚುನಾವಣೆ ಎದುರಿಸಿದ್ದ ಬಿಜೆಪಿ, ಮೂರು ಹಿಂದಿ ರಾಜ್ಯಗಳಲ್ಲಿ ಹೀನಾಯವಾಗಿ ಸೋತಿದ್ದರೂ ಸಹ ಬಿಜೆಪಿ ನೇತೃತ್ವದ ಎನ್‌ಡಿಎ ಲೋಕಸಭೆಯಲ್ಲಿ ಬಹುಮತ ಪಡೆಯುವ ಮೂಲಕ ಸತತ ಮೂರನೇ ಅವಧಿಗೆ ಸರ್ಕಾರ ರಚಿಸಲು ಪ್ರಧಾನಿ ನರೇಂದ್ರ ಮೋದಿ ಸಜ್ಜಾಗಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ 83 ವರ್ಷದ ಪವಾರ್, ಮೋದಿ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಅಸಮಾಧಾನದ ಜೊತೆಗೆ, ಬೆಲೆ ಏರಿಕೆ, ರೈತರ ಸಂಕಷ್ಟ ಮತ್ತು ನಿರುದ್ಯೋಗದಂತಹ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರದ ವಿರುದ್ಧ ಮತದಾರರು ಅತೃಪ್ತರಾಗಿದ್ದಾರೆ ಎಂದು ತಿಳಿಸಿದರು.
ಇಂಡಿಯಾ ಮೈತ್ರಿಕೂಟದ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಟಿಡಿಪಿ ಅಥವಾ ಜೆಡಿಯು ಅನ್ನು ಸಂಪರ್ಕಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂಡಿಯಾ ಮೈತ್ರಿಕೂಟದಲ್ಲಿ ಇನ್ನೂ ಅಂತಹ ಯಾವುದೇ ಚರ್ಚೆ ನಡೆದಿಲ್ಲ. ಈ ಬಗ್ಗೆ ನಾವು ಇನ್ನೂ ಮಾತನಾಡಿಲ್ಲ ಎಂದು ಪವಾರ್ ಹೇಳಿದರು.
ಮೈತ್ರಿಕೂಟದ ನಾಯಕರು ಬುಧವಾರ ಸಭೆ ನಡೆಸುತ್ತಿದ್ದು, ಸಾಮೂಹಿಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ನನಗೆ ಯಾವುದೇ ವೈಯಕ್ತಿಕ ಅಭಿಪ್ರಾಯವಿಲ್ಲ, ನಾವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಸಾಮೂಹಿಕ ನಿರ್ಧಾರವಾಗಿರುತ್ತದೆ ಎಂದರು.
ಮಾಜಿ ಕೇಂದ್ರ ಸಚಿವ ಪವಾರ್ ಅವರು ವಿಪಕ್ಷಗಳ ಮೈತ್ರಿಯ ಮುಂದಿನ ಹಾದಿ ಅಥವಾ ಕ್ರಮವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿದೆ. ಅವರ ಪಕ್ಷವಾದ ಎನ್‌ಸಿಪಿ (ಶರದ್‌ಚಂದ್ರ ಪವಾರ್) ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಲ್ಲಿ 10 ರಲ್ಲಿ ಸ್ಪರ್ಧಿಸಿ 8 ರಲ್ಲಿ ಗೆದ್ದಿದೆ.
Advertisement