ಲೋಕಸಭಾ ಚುನಾವಣೆ ಫಲಿತಾಂಶ 2024: ದೆಹಲಿಯತ್ತ ದೇಶದ ಚಿತ್ತ; ಒಂದೇ ವಿಮಾನದಲ್ಲಿ ನಿತೀಶ್​-ತೇಜಸ್ವಿ ದೆಹಲಿಗೆ ಪ್ರಯಾಣ!

ಲೋಕಸಭೆ ಚುನಾವಣೆ ಫಲಿತಾಂಶ 2024 ಪ್ರಕಟಗೊಂಡಿದ್ದು, ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿಲ್ಲ. ಹೀಗಾಗಿ ಅತಂತ್ರ ಸ್ಥಿತಿ ಎದುರಾಗಿದೆ.ಆದರೆ, ಬಿಜೆಪಿ 240 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅತಿದೊಡ್ಡ ಪಕ್ಷ...
ಒಂದೇ ವಿಮಾನದಲ್ಲಿ ಕಾಣಿಸಿಕೊಂಡ ನಿತೀಶ್ ಕುಮಾರ್-ತೇಜಸ್ವಿ ಯಾದವ್.
ಒಂದೇ ವಿಮಾನದಲ್ಲಿ ಕಾಣಿಸಿಕೊಂಡ ನಿತೀಶ್ ಕುಮಾರ್-ತೇಜಸ್ವಿ ಯಾದವ್.
Updated on

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶ 2024 ಪ್ರಕಟಗೊಂಡಿದ್ದು, ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿಲ್ಲ. ಹೀಗಾಗಿ ಅತಂತ್ರ ಸ್ಥಿತಿ ಎದುರಾಗಿದೆ.ಆದರೆ, ಬಿಜೆಪಿ 240 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಬಿಜೆಪಿ ನೇತೃತ್ವದ ಎನ್​ಡಿಎ ಬಹುಮತ ಪಡೆದಿರುವುದರಿಂದ 3ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಮಂತ್ರಿ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಕಾಂಗ್ರೆಸ್​ ಕೂಡ ಅಧಿಕಾರ ರಚನೆಗೆ ಕಸರತ್ತು ಶುರು ಮಾಡಿದೆ. ಇಂದು ಎನ್​ಡಿಎ ಮತ್ತು INDIA ಮೈತ್ರಿ ಒಕ್ಕೂಟ ಮಹತ್ವದ ಸಭೆಯನ್ನು ನಡೆಸಲಿವೆ.

ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 294 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸರ್ಕಾರ ರಚನೆಗೆ ಬೇಕಿರುವ 272 ಬಹುಮತದ ಗುರಿಗಿಂತ 22 ಸ್ಥಾನಗಳಲ್ಲಿ ಮುಂದಿದೆ. ಇತ್ತ ವಿಪಕ್ಷಗಳ ಮೈತ್ರಿ ಒಕ್ಕೂಟ 234 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಬಹುಮತದ ಗುರಿಗಿಂತ 38 ಸ್ಥಾನಗಳು ಕಡಿಮೆ ಇದೆ. ಇದೀಗ ಸರ್ಕಾರ ರಚನೆಯಲ್ಲಿ ಆಂಧ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ತೆಲಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ಬಿಹಾರದ ಹಾಲಿ ಸಿಎಂ ನಿತೀಶ್​ ಕುಮಾರ್​ ಅವರ ಜೆಡಿಯು ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತವೆ.

ಇನ್ನು ಈ ಎರಡು ಪಕ್ಷಗಳು ಬಿಜೆಪಿ ಜತೆ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ಟಿಡಿಪಿ ಮತ್ತು ಜೆಡಿಯು ಎನ್​ಡಿಎ ಮೈತ್ರಿಕೂಟದ ಭಾಗವಾಗಿವೆ. ವಿಪಕ್ಷಗಳ ಮೈತ್ರಿ ಒಕ್ಕೂಟ ಸರ್ಕಾರ ರಚನೆ ಮಾಡಬೇಕಾದರೆ ಟಿಡಿಪಿ ಮತ್ತು ಜೆಡಿಯು ಬೆಂಬಲದ ಅವಶ್ಯಕತೆ ಇದೆ. ಹೀಗಾಗಿ ಈಗಾಗಲೇ ಉಭಯ ಪಕ್ಷದ ಪ್ರಮುಖ ನಾಯಕರನ್ನು ಸಂಪರ್ಕಿಸಲು ಕಾಂಗ್ರೆಸ್​ ಯತ್ನಿಸಿದೆ.

ಒಂದೇ ವಿಮಾನದಲ್ಲಿ ಕಾಣಿಸಿಕೊಂಡ ನಿತೀಶ್ ಕುಮಾರ್-ತೇಜಸ್ವಿ ಯಾದವ್.
ನಿತೀಶ್ ಕುಮಾರ್ ಅವರಿಗಿಂತ ಉತ್ತಮ ಪ್ರಧಾನಿ ಯಾರು? ಸರ್ಕಾರ ರಚನೆಗೂ ಮುನ್ನವೇ ಜೆಡಿಯು ಭಿನ್ನರಾಗ!

ಚುನಾವಣಾ ಫಲಿತಾಂಶ ಹೊರಬಿದ್ದ ಒಂದು ದಿನದ ಬೆನ್ನಲ್ಲೇ ಎನ್​ಡಿಎ ಮತ್ತು ಇಂಡಿ ಒಕ್ಕೂಟ ಇಂದು ಮಹತ್ವದ ಸಭೆಗಳನ್ನು ನಡೆಸುತ್ತಿವೆ. ಸಭೆಯಲ್ಲಿ ಮುಂದೆ ಏನು ಮಾಡಬೇಕೆಂದು ತೀರ್ಮಾನಿಸಲಿವೆ. ಈ ಸಭೆಯಲ್ಲಿ ಹಾಜರಾಗಲು ಈಗಾಗಲೇ ಪ್ರಮುಖ ನಾಯಕ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಅದರಲ್ಲೂ ಜೆಡಿಯು ನಾಯಕ ನಿತೀಶ್​ ಕುಮಾರ್​ ಮತ್ತು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​​ ಇಬ್ಬರು ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ.

ಮೂಲಗಳ ಪ್ರಕಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ಬುಧವಾರ ದೆಹಲಿಗೆ ತೆರಳಿದ್ದು, ದೆಹಲಿಯಲ್ಲಿ ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ, ಸಿಎಂ ನಿತೀಶ್ ಕುಮಾರ್ ದೆಹಲಿಗೆ ತೆರಳಲಿರುವ ವಿಮಾನದಲ್ಲಿ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಕೂಡ ಇದ್ದಾರೆ.

ವಿಮಾನವು ಬೆಳಿಗ್ಗೆ 10:45 ಕ್ಕೆ ಬಿಹಾರದಿಂದ ದೆಹಲಿಗೆ ಹೊರಟಿದ್ದು, ಇದರಲ್ಲಿ ಎನ್‌ಡಿಎ ಮೈತ್ರಿ ಕೂಟದ ನಾಯಕ ನಿತೀಶ್ ಕುಮಾರ್ ಅವರು ವಿಪಕ್ಷಗಳ ಮೈತ್ರಿಕೂಟದ ನಾಯಕರ ಜೊತೆ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ನಿತೀಶ್ ಕುಮಾರ್ ಮತ್ತು ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಇಬ್ಬರೂ ನಾಯಕರು ಫ್ಲೈಟ್‌ನಲ್ಲಿ ಹೋಗಿರುವುದರಿಂದ ರಾಜಕೀಯ ಜಟಾಪಟಿ ತೀವ್ರಗೊಂಡಿದೆ.

ಒಂದೇ ವಿಮಾನದಲ್ಲಿ ಕಾಣಿಸಿಕೊಂಡ ನಿತೀಶ್ ಕುಮಾರ್-ತೇಜಸ್ವಿ ಯಾದವ್.
ದೆಹಲಿಗೆ ಹೊರಟ ಎನ್.ಚಂದ್ರಬಾಬು ನಾಯ್ಡು: ನಾವು NDA ಭಾಗವಾಗಿದ್ದೇವೆ ಎಂದ 'ಕಿಂಗ್ ಮೇಕರ್'

ಅಂದಹಾಗೆ ಜೆಡಿಯು ಮತ್ತು ಆರ್​ಜೆಡಿ ಈ ಹಿಂದೆ ಮೈತ್ರಿ ಮಾಡಿಕೊಂಡಿದ್ದನ್ನು ಮರೆಯುವಂತಿಲ್ಲ. ಆದರೆ, ನಮ್ಮ ಬೆಂಬಲ ಎನ್​ಡಿಎಗೆ ಎಂದು ಈಗಾಗಲೇ ನಿತೀಶ್​ ಕುಮಾರ್​ ಹೇಳಿದ್ದಾರೆ. ಆದರೂ, ಅವರು ಯಾವಾಗಬೇಕಾದರೂ ಮನಸ್ಸು ಬದಲಾಯಿಸುವ ಸಾಧ್ಯತೆಗಳಿವೆ.

ನಿತೀಶ್ ಕುಮಾರ್ ಅವರ ಆಪ್ತ ಸಹಾಯಕ ಮತ್ತು ಜೆಡಿಯು ನಾಯಕ ಕೆಸಿ ತ್ಯಾಗಿ ನಿನ್ನೆ ನಿನ್ನೆ ಸುದ್ದಿ ಸಂಸ್ಥೆ ಎಎನ್‌ಐ ಜತೆ ಮಾತನಾಡಿ, ತಮ್ಮ ಪಕ್ಷವು ಎನ್‌ಡಿಎಯಲ್ಲಿ ಉಳಿಯುತ್ತದೆ ಮತ್ತು ವಿಪಕ್ಷಗಳ ಮೈತ್ರಿ ಒಕ್ಕೂಟವನ್ನು ಬೆಂಬಲಿಸುವ ಊಹಾಪೋಹಗಳನ್ನು ತಿರಸ್ಕರಿಸಿದರು.

ಮತ್ತೊಂದೆಡೆ ಆಂಧ್ರಪ್ರದೇಶದಲ್ಲಿ ಎನ್‌ಡಿಎ ಗೆಲುವಿಗೆ ಪ್ರಧಾನಿ ಮೋದಿಯವರನ್ನು ಅಭಿನಂದಿಸಿದ ಮತ್ತೊಬ್ಬ ಕಿಂಗ್‌ಮೇಕರ್ ಚಂದ್ರಬಾಬು ನಾಯ್ಡು, ಟಿಡಿಪಿ ಮತ್ತು ಬಿಜೆಪಿ ಒಟ್ಟಾಗಿ ರಾಜ್ಯವನ್ನು ಮರುನಿರ್ಮಾಣ ಮಾಡುತ್ತವೆ ಎಂದರು. ಆದಾಗ್ಯೂ, ಈ ಇಬ್ಬರೂ ನಾಯಕರು ಈ ಹಿಂದೆ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಬಲವಾಗಿ ಟೀಕಿಸಿದ್ದಾರೆ ಎಂಬುದನ್ನು ಸ್ಮರಿಸಬೇಕಿದೆ.

ಇಂದು ನಡೆಯುವ ಪ್ರಮುಖ ಸಭೆಗಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸಿರುವ ವಿಪಕ್ಷಗಳ ಮೈತ್ರಿ ಒಕ್ಕೂಟದ ನಾಯಕರಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆರ್‌ಜೆಡಿಯ ತೇಜಸ್ವಿ ಯಾದವ್, ಶಿವಸೇನೆಯ ಉದ್ಧವ್ ಠಾಕ್ರೆ, ಎನ್​ಸಿಪಿಯ ಶರದ್ ಪವಾರ್ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ಸೇರಿದ್ದಾರೆ.

ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳಲು ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಶಿವಸೇನೆ ನಾಯಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಹಿಂದೂಸ್ತಾಂ ಅವಾಮ್ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಝಿ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್ ಮತ್ತು ಜೆಡಿಎಸ್‌ ನಾಯಕ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ದೆಹಲಿಗೆ ಪಯಣ ಬೆಳೆಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com