
ಲಖನೌ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಸಂಕೀರ್ಣದಲ್ಲಿ ನಿಯೋಜಿಸಲಾಗಿದ್ದ ಉತ್ತರ ಪ್ರದೇಶದ ವಿಶೇಷ ಭದ್ರತಾ ಪಡೆ(ಯುಪಿಎಸ್‌ಎಸ್‌ಎಫ್)ಯ ಕಾನ್‌ಸ್ಟೆಬಲ್ ಒಬ್ಬರು ಅವರ ಬಳಿ ಇದ್ದ ರೈಫಲ್ ಆಕಸ್ಮಿಕವಾಗಿ ಫೈರ್ ಆಗಿ ಸಾವನ್ನಪ್ಪಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಇದು ಆಕಸ್ಮಿಕ ಫೈರಿಂಗೋ ಅಥವಾ ಆತ್ಮಹತ್ಯೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ರಾಮಮಂದಿರದ ಭದ್ರತೆಗಾಗಿ ಯುಪಿಎಸ್ಎಸ್ಎಫ್ ಅನ್ನು ವಿಶೇಷವಾಗಿ ರಚಿಸಲಾಗಿದೆ. ಮೃತ ಪೊಲೀಸ್ ಪೇದೆಯನ್ನು ಶತ್ರುಘ್ನ ವಿಶ್ವಕರ್ಮ(25) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ 5.25ಕ್ಕೆ ಈ ಘಟನೆ ನಡೆದಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಾಮಮಂದಿರದ ಮುಖ್ಯ ಭಾಗದಿಂದ ಸುಮಾರು 150 ಮೀಟರ್ ದೂರದಲ್ಲಿರುವ ಕೋಟೇಶ್ವರ ದೇವಾಲಯದ ಮುಂಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ವಿಐಪಿ ಗೇಟ್ ಬಳಿ ವಿಶ್ವಕರ್ಮ ಅವರನ್ನು ನಿಯೋಜಿಸಲಾಗಿತ್ತು. ಘಟನೆಯ ಸಮಯದಲ್ಲಿ ಅವರು ಹಲವಾರು ಇತರ ಭದ್ರತಾ ಸಿಬ್ಬಂದಿಯೊಂದಿಗೆ ಕರ್ತವ್ಯದಲ್ಲಿದ್ದರು.
ಗುಂಡು ವಿಶ್ವಕರ್ಮ ಅವರ ಹಣೆಗೆ ತಗುಲಿದೆ. ಸಹ ಭದ್ರತಾ ಸಿಬ್ಬಂದಿ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವಿಧಿವಿಜ್ಞಾನ ತಂಡವು ಸ್ಥಳ ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement