
ಭುವನೇಶ್ವರ: ಒಡಿಶಾ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಬುಧವಾರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಟ್ನಾಯಕ್, ಬಿಜೆಡಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. "ನಾವು ಬಿಜೆಡಿ ಶಾಸಕರ ಸಭೆ ನಡೆಸಿದ್ದೇವೆ. ಶಾಸಕರು ನನ್ನನ್ನು ವಿರೋಧ ಪಕ್ಷದ ನಾಯಕ ಮತ್ತು ಬಿಜೆಡಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ" ಎಂದರು.
ಹಿರಿಯ ಶಾಸಕ ಪ್ರಸನ್ನ ಆಚಾರ್ಯ ಅವರನ್ನು ಪ್ರತಿಪಕ್ಷದ ಉಪನಾಯಕರನ್ನಾಗಿ ಮತ್ತು ಮಾಜಿ ಸ್ಪೀಕರ್ ಪ್ರಮೀಳಾ ಮಲ್ಲಿಕ್ ಅವರನ್ನು ಸದನದಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ನೇಮಕ ಮಾಡಲಾಗಿದೆ ಎಂದು ಪಟ್ನಾಯಕ್ ತಿಳಿಸಿದ್ದಾರೆ.
ಪ್ರತಾಪ್ ಕೇಶರಿ ದೇಬ್ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ಉಪ ಮುಖ್ಯ ಸಚೇತಕರನ್ನಾಗಿ ನೇಮಿಸಲಾಗಿದೆ.
ರಾಜ್ಯದಲ್ಲಿ 24 ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಡಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದು, ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮೊದಲ ಬಾರಿ ಅಧಿಕಾರಕ್ಕೆ ಬಂದಿದೆ.
Advertisement