
ಅಮರಾವತಿ: ಆಂಧ್ರ ಪ್ರದೇಶ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿದ್ದ ರುಷಿಕೊಂಡ ರಾಜಮಹಲ್ ರಹಸ್ಯ ಬಯಲಾಗಿದ್ದು, ಮೂರೂವರೆ ವರ್ಷಗಳಿಂದ ಜನ ಸಾಮಾನ್ಯರು ಹಾಗೂ ರಾಜಕೀಯ ಮುಖಂಡರ ಕಣ್ಣಿಗೆ ಬೀಳದಂತೆ ಸುಮಾರು 500 ಕೋಟಿ ರೂಪಾಯಿ ಸಾರ್ವಜನಿಕ ಹಣದಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾದ ರುಷಿಕೊಂಡ ಕಟ್ಟಡಕ್ಕೆ ತೆಲುಗುದೇಶಂ ನಾಯಕರು ಭೇಟಿ ನೀಡಿದ್ದಾರೆ.
ಹೌದು.. ಐಷಾರಾಮಿ ಕಟ್ಟಡಗಳು.. ಕಣ್ಣು ಕೋರೈಸುವ ಒಳಾಂಗಣ... ಐಷಾರಾಮಿ ಪೀಠೋಪಕರಣಗಳು... ಏಳು ಬಣ್ಣಗಳಿಂದ ಕೂಡಿದ ರುಷಿಕೊಂಡ ಮೇಲೆ ಜಗನ್ ನಿರ್ಮಿಸಿದ ರಾಜಮಹಲ್ ಇದು. ಹಲವು ವರ್ಷಗಳಿಂದ ವೈಸಿಪಿ (ವೈಎಸ್ ಆರ್ ಕಾಂಗ್ರೆಸ್) ಆಡಳಿತದಲ್ಲಿ ಗುಟ್ಟಾಗಿಯೇ ಉಳಿದಿದ್ದ ರುಷಿಕೊಂಡ ರಹಸ್ಯ ಈಗ ಬಯಲಾಗಿದೆ.
ಅಕ್ಷರಶಃ ಇದು ಕೊಟೆಯಂತಿದ್ದು, ಕೋಟೆಯ ಬಾಗಿಲು ತೆರೆದ ತಕ್ಷಣ ಸಾರ್ವಜನಿಕರ ಹಣದಿಂದ 500 ಕೋಟಿ ರೂಪಾಯಿಗಳ ವೆಟ್ಟದಲ್ಲಿ ನಿರ್ಮಾಣವಾಗಿರುವ ಐಷಾರಾಮಿ ಕಟ್ಟಡಗಳು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿವೆ.
ಇಲ್ಲಿದ್ದ ದಪ್ರವಾಸೋದ್ಯಮ ಕಟ್ಟಡಗಳನ್ನು ಕೆಡವಿ ಈ ಭವ್ಯ ಬಂಗಲೆಗಳನ್ನು ನಿರ್ಮಿಸಲಾಗಿದ್ದು, ಯಾವ ಉದ್ದೇಶಕ್ಕೆ ಇಷ್ಟು ಭವ್ಯ ಮಹಲ್ ಗಳನ್ನು ನಿರ್ಮಿಸಲಾಗಿದೆ ಎಂದು ಟಿಡಿಪಿ ನಾಯಕರು ಪ್ರಶ್ನಿಸುತ್ತಿದ್ದಾರೆ. ಕೆಲ ನಾಯಕರು ವೈಸಿಪಿ ನಾಯಕರು ತಮ್ಮ ವಿಲಾಸಿ ಜೀವನಕ್ಕಾಗಿ ಸಾರ್ವಜನಿಕರ ಹಣವನ್ನು ಪೋಲು ಮಾಡಿ ಈ ಭವ್ಯ ಬಂಗಲೆಗಳನ್ನು ಕಟ್ಟಿಸಿಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಅಲ್ಲದೆ ಈ ಭವ್ಯ ಮತ್ತು ವಿಲಾಸಿ ಕಟ್ಟಡಗಳ ನಿರ್ಮಾಣಕ್ಕಾಗಿ ಆಗಿನ ಜಗನ್ ಸರ್ಕಾರ ಪರಿಸರ ಇಲಾಖೆಯ ಕಾನೂನುಗಳನ್ನೇ ಗಾಳಿಗೆ ತೂರಿ ಸುಮಾರು 9.8 ಎಕರೆ ಪ್ರದೇಶದಲ್ಲಿ ಏಳು ಬ್ಲಾಕ್‌ಗಳನ್ನು ನಿರ್ಮಿಸಿದೆ ಎಂದು ಆರೋಪಿಸಲಾಗಿದೆ.
ಈ ಬ್ಲಾಕ್‌ನಲ್ಲಿರುವ ಕಟ್ಟಡಗಳು ರಾಜಮನೆತನದ ಅರಮನೆಗಳಿಗಿಂತ ಕಡಿಮೆಯೇನಿಲ್ಲ. ಇದರಲ್ಲಿ ಸಿಎಂ ಕ್ಯಾಂಪ್ ಆಫೀಸ್, ವಿಡಿಯೋ ಕಾನ್ಫರೆನ್ಸ್ ಹಾಲ್, 500 ಜನರಿಗೆ ಕಾನ್ಫರೆನ್ಸ್ ಹಾಲ್ ಮತ್ತು 52 ಜನರ ಸಾಮರ್ಥ್ಯದ ನಿಯಂತ್ರಣ ಕೊಠಡಿ ಇದೆ. ಅದರಲ್ಲಿರುವ ಪೀಠೋಪಕರಣಗಳು ಅದ್ಭುತವಾಗಿದ್ದು, ಪಿಠೋಪಕರಣಗಳಿಗಾಗಿಯೇ ಕೋಟ್ಯಂತರ ರೂ ಗಳನ್ನು ವ್ಯಯಿಸಲಾಗಿದೆ ಎಂದು ಹೇಳಲಾಗಿದೆ.
ಈ ಎಲ್ಲ ವ್ಯವಸ್ಥೆಗಳು ಕಚೇರಿಗಾಗಿ ಅಲ್ಲ.. ಬದಲಿಗೆ ತಮ್ಮ ವಿಲಾಸಿ ಜೀವನಕ್ಕಾಗಿ ಮತ್ತು ಐಷಾರಾಮಿ ನಿವಾಸಕ್ಕಾಗಿ ನಿರ್ಮಿಸಿಕೊಳ್ಳಲಾಗಿದೆ ಎಂದು ಟಿಡಿಪಿ ಆರೋಪಿಸಿದೆ, ಕಚೇರಿಗಾಗಿ ಅಲ್ಲ. ಇಲ್ಲಿ ಈ ರಾಜಮಹಲ್ ನಿರ್ಮಾಣಕ್ಕಾಗಿ ಭೂಮಿ ಹದಗೊಳಿಸಲು ಮತ್ತು ಇಲ್ಲಿನ ಮರಗಳನ್ನು ಕಿತ್ತುಹಾಕಲೆಂದೇ ಸುಮಾರು 95 ಕೋಟಿ ರೂಗಳನ್ನು ವ್ಯಯಿಸಲಾಗಿದೆಯಂತೆ.
ರಾಜಮಹಲ್ ವಿಶೇಷತೆಗಳು
ಐಷಾಪಾಮಿ ಸ್ನಾನದ ತೊಟ್ಟಿಗಳು ಮತ್ತು ಐಷಾರಾಮಿ ಹಾಸಿಗೆಗಳು. 360 ಡಿಗ್ರಿ ದೀಪಗಳು, ವಿವಿಧ ಫ್ಯಾನ್‌ಗಳು, ದುಬಾರಿ ಪರದೆಗಳಿವೆ. ರುಷಿಕೊಂಡ ಕಟ್ಟಡಗಳಲ್ಲಿ ಪ್ರತಿ ಸ್ನಾನಗೃಹಕ್ಕೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗಿದೆಯಂತೆ. ಸ್ನಾನಗೃಹದಲ್ಲಿ ಸ್ಪಾ ಮತ್ತು ದುಬಾರಿ ಕೇಂದ್ರೀಕೃತ ಎಸಿ ಇದೆ. ವಿಜಯನಗರ ಬ್ಲಾಕ್ ಮುಂಭಾಗದಲ್ಲಿ ಬೃಹತ್ ಉದ್ಯಾನ ನಿರ್ಮಿಸಲಾಗಿದ್ದು, ಉದ್ಯಾನವನಕ್ಕಾಗಿ ಸುಮಾರು 22 ಕೋಟಿ ರೂ ವೆಚ್ಚದಲ್ಲಿ ಅಪರೂಪದ ಗಿಡಗಳನ್ನು ತರಿಸಿ ಇಲ್ಲಿ ನೆಡಸಿಲಾಗಿದೆಯಂತೆ.
ಅಂತೆಯೇ ಇಲ್ಲಿನ ಕೊಠಡಿಗಳಲ್ಲಿ ಹಾಕಲಾಗಿರುವ ಬಾತ್ ಟಬ್ ಒಂದರ ಬೆಲೆಯೇ 40 ಲಕ್ಷರೂಗಳು ಎನ್ನಲಾಗಿದೆ. ಈ ರಾಜಮಹಲ್ ಒಳಂಗಾಣ ವಿನ್ಯಾಸಕ್ಕಾಗಿಯೇ ಸುಮಾರು 50 ಕೋಟಿ ರೂ ವ್ಯಯಿಸಲಾಗಿದೆ. ಈ ಕಟ್ಟಡಗಳ ಸುತ್ತಮುತ್ತಲ ಪ್ರದೇಶಗಳನ್ನು ಚೆಂದವಾಗಿಸಲೆಂದೇ 21 ಕೋಟಿ ರೂಗಳನ್ನು ವ್ಯಯಿಸಲಾಗಿದೆಯಂತೆ.
ಈ ಕಟ್ಟಡಗಳ ಸಂಪೂರ್ಣ ನಿರ್ಮಾಣದಲ್ಲಿ ವಿಯೆಟ್ನಾಂ ಗ್ರಾನೈಟ್, ಮಾರ್ಬಲ್ ಮತ್ತು ಇಟಾಲಿಯನ್ ಗ್ರಾನೈಟ್ ಅನ್ನು ಬಳಸಲಾಗಿದೆ. ಎಲ್ಲಾ ಪೀಠೋಪಕರಣಗಳನ್ನು ವಿಯೆಟ್ನಾಂನಿಂದ ತರಿಸಲಾಗಿದ್ದು, ಇಡೀ ಕಟ್ಟಡಕ್ಕೆ ನಾಲ್ಕು ಜನರೇಟರ್ ಮತ್ತು ಸೌರ ವಿದ್ಯುತ್ ಸಹಾಯಕ ಬ್ಲಾಕ್ ಅನ್ನು ಸಹ ಅಳವಡಿಸಲಾಗಿದೆ. ಈ ಋಷಿಕೊಂಡದಲ್ಲಿ ಐಷಾರಾಮಿ ಕಟ್ಟಡಗಳ ನಿರ್ಮಾಣಕ್ಕೆ 500 ಕೋಟಿ ರೂ. ವ್ಯಯಿಸಲಾಗಿದ್ದು, ಬೆಟ್ಟದ ಆರಂಭಿಕ ಕಾಮಗಾರಿಗೆ 90 ಕೋಟಿ... ಲ್ಯಾಂಡ್ ಸ್ಕೇಪಿಂಗ್ ಗೆ 61 ಕೋಟಿ ರೂಗಳನ್ನು ವ್ಯಯಿಸಲಾಗಿದೆ.
ಈ ಕಟ್ಟಡಗಳನ್ನು ಪ್ರವಾಸೋದ್ಯಮದ ಅಗತ್ಯಕ್ಕೆ ಅನುಗುಣವಾಗಿ ನಿರ್ಮಿಸಲಾಗಿಲ್ಲ ಎಂದು ತೆಲುಗುದೇಶಂ ಮುಖಂಡರು ಆರೋಪಿಸಿದ್ದು, ಸಿಎಂ ಕ್ಯಾಂಪ್ ಕಚೇರಿ ಹಾಗೂ ಅಧಿಕೃತ ನಿವಾಸವನ್ನು ಪರಿವರ್ತಿಸಲು ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಟೀಕಿಸಿದರು.
ಇಂತಹ ಐಷಾರಾಮಿ ಕಟ್ಟಡಗಳನ್ನು ಈಗ ಹೇಗೆ ಬಳಸುವುದು ಎಂಬುದು ಪ್ರಶ್ನೆಯಾಗಿ ಪರಿಣಮಿಸಿದ್ದು, ಪರಿಸರ ಸಚಿವ ಪವನ್ ಕಲ್ಯಾಣ್ ಹಾಗೂ ಪ್ರವಾಸೋದ್ಯಮ ಸಚಿವ ಕಂದುಲ ದುರ್ಗೇಶ್ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
Advertisement