
ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯದ ಜಾಮೀನಿಂದ ನಿರಾಳವಾಗಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ದೆಹಲಿ ಹೈಕೋರ್ಟ್ ಶುಕ್ರವಾರ ಶಾಕ್ ನೀಡಿದೆ. ಕೇಜ್ರಿವಾಲ್ ಬಿಡುಗಡೆ ಮಾಡುವ ಆದೇಶಕ್ಕೆ ದೆಹಲಿ ಹೈಕೋರ್ಟ್ ತಡೆ ನೀಡಿದೆ.
ನ್ಯಾಯಮೂರ್ತಿಗಳಾದ ಸುಧೀರ್ ಕುಮಾರ್ ಜೈನ್ ಮತ್ತು ರವೀಂದ್ರ ದುಡೇಜಾ ಅವರ ರಜಾಕಾಲೀನ ವಿಭಾಗೀಯ ಪೀಠದ ಮುಂದೆ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಉಲ್ಲೇಖಿಸಿದರು.
ವಿಚಾರಣಾಧೀನ ನ್ಯಾಯಾಲಯದ ಜಾಮೀನು ಆದೇಶಕ್ಕೆ ತುರ್ತು ತಡೆ ನೀಡಬೇಕು ಎಂದು ಕೋರುತ್ತಿದ್ದೇನೆ. ರಾತ್ರಿ 8ಗೆ ಆದೇಶ ಮಾಡಲಾಗಿದೆ. ಇನ್ನೂ ಆದೇಶವನ್ನು ಅಪ್‌ಲೋಡ್ ಮಾಡಲಾಗಿಲ್ಲ. ಜಾಮೀನಿಗೆ ವಿರೋಧಿಸಲು ನಮಗೆ ಸೂಕ್ತ ಅವಕಾಶ ನೀಡಿಲ್ಲ” ಎಂದು ಎಎಸ್‌ಜಿ ಹೇಳಿದರು.
ನನ್ನ ವಾದವನ್ನು ತುಂಡರಿಸಿದರು ಎಂಬ ಅಂಶ ʼಬಾರ್ ಅಂಡ್ ಬೆಂಚ್ʼ ವರದಿಯಲ್ಲಿದೆ. ಜಾಮೀನು ಆದೇಶಕ್ಕೆ ತಡೆ ನೀಡಬೇಕು ಎಂಬ ತನ್ನ ಕೋರಿಕೆಯನ್ನೂ ಪರಿಗಣಿಸಲಾಗಿಲ್ಲ. ಹೀಗಾಗಿ, ವಿಚಾರಣಾಧೀನ ಆದೇಶಕ್ಕೆ ತಡೆ ವಿಧಿಸಬೇಕು ಹಾಗೂ ಸಾಧ್ಯವಾದಷ್ಟು ಬೇಗ ವಾದ ಆಲಿಸಬೇಕು. ಪ್ರಕರಣದಲ್ಲಿ ವಾದಿಸಲು ಪೂರ್ಣ ಅವಕಾಶವನ್ನು ನಮಗೆ ನಿರಾಕರಿಸಲಾಗಿದೆ. ಅತ್ಯಂತ ಗಂಭೀರವಾಗಿ ಈ ಆರೋಪ ಮಾಡುತ್ತಿದ್ದೇನೆ ಎಂದರು.
ಕೇಜ್ರಿವಾಲ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಜಾರಿ ನಿರ್ದೇಶನಾಲಯದ ಜಾಮೀನು ಆದೇಶಕ್ಕೆ ತಡೆ ಕೋರಿಕೆಗೆ ವಿರೋಧಿಸಿದರು.
ಜಾಮೀನು ರದ್ದತಿಯು ಜಾಮೀನು ನೀಡುವುದಕ್ಕಿಂತ ವಿಭಿನ್ನ ಎನ್ನುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಹತ್ತು ತೀರ್ಪುಗಳಿವೆ ಎಂದರು.
ಪಕ್ಷಕಾರರನ್ನು ಆಲಿಸಿದ ಪೀಠವು ಪ್ರಕರಣದಲ್ಲಿ ವಾದ ಆಲಿಸುವವರೆಗೆ ಜಾಮೀನು ಆದೇಶ ಜಾರಿಗೊಳಿಸಬಾರದು. ನಾವು ಅಂತಿಮ ಆದೇಶ ಮಾಡಿಲ್ಲ ಎಂದ ಪೀಠವು ಇಂದೇ ವಿಚಾರಣೆ ನಡೆಸುವುದಾಗಿ ಹೇಳಿದೆ.
Advertisement